ಮುಂಬೈ:ದೇಶಾದ್ಯಂತ ಸಾಕಷ್ಟು ಸಂಚಲನ ಸೃಷ್ಟಿಸಿದ ಬುಲ್ಲಿ ಬಾಯ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿರುವ ಮುಂಬೈ ಸೈಬರ್ ಸೆಲ್ ಪೊಲೀಸರು, ಆರೋಪಿಗಳು ಸುಲ್ಲಿ ಡೀಲ್ಸ್ ಆ್ಯಪ್ ಕೇಸ್ನಲ್ಲೂ ಭಾಗಿಯಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಬುಲ್ಲಿ ಬಾಯ್ ಆ್ಯಪ್ ಪ್ರಕರಣದಲ್ಲಿ ಬಂಧಿತರಾಗಿರುವ ವಿಶಾಲ್ ಕುಮಾರ್ ಝಾ, ಶ್ವೇತಾ ಸಿಂಗ್ ಮತ್ತು ಮಯಾಂಕ್ ರಾವತ್ ಮುಂಬೈ ಕೋರ್ಟ್ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮುಂಬೈ ಪೊಲೀಸ್, ಆರೋಪಿಗಳು ಸುಲ್ಲಿ ಡೀಲ್ಸ್ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ತನಿಖೆಗಳ ಪ್ರಕಾರ ಆರೋಪಿಗಳು ಸುಲ್ಲಿ ಡೀಲ್ಸ್ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಲ್ಲಿ ಬಾಯ್ ಆ್ಯಪ್ ತಯಾರಕನಾದ ನೀರಜ್ ಬಿಷ್ಣೋಯ್ ನೆರವಿನಿಂದ ಅವರು ಅಪರಾಧದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.