ವಾರಣಾಸಿ(ಉತ್ತರ ಪ್ರದೇಶ): ಸಹೋದರ- ಸಹೋದರಿಯರ ಪ್ರೀತಿಯ ಪ್ರತೀಕ ರಕ್ಷಾ ಬಂಧನ ಆಚರಣೆಗೆ ದಿನಗಣನೇ ಆರಂಭಗೊಂಡಿದ್ದು, ಮಾರುಕಟ್ಟೆಯಲ್ಲಿ ಈಗಾಗಲೇ ವಿಭಿನ್ನ ರೀತಿಯ ರಾಖಿಗಳು ಗಮನ ಸೆಳೆಯುತ್ತಿವೆ. ಆದರೆ, ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ರಾಖಿ ಸಿಕ್ಕಾಪಟ್ಟೆ ಟ್ರೆಂಡ್ನಲ್ಲಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನ ಬುಲ್ಡೋಜರ್ ಬಾಬಾ ಎಂದು ಈ ಹಿಂದಿನಿಂದಲೂ ಬಿಂಬಿಸಲಾಗ್ತಿದೆ. ಇದೀಗ 'ಬುಲ್ಡೋಜರ್ ರಾಖಿ' ಎಂದು ಹೆಸರಿಟ್ಟಿರುವ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಹಾಕಿವೆ.
ಪ್ರಮುಖವಾಗಿ ಉತ್ತರ ಪ್ರದೇಶದ ಪೂರ್ವಾಂಚಲ್ನಲ್ಲಿ ಇವುಗಳಿಗೆ ಇನ್ನಿಲ್ಲದ ಬೇಡಿಕೆ ಇದೆ. ಮಾರುಕಟ್ಟೆಗಳಲ್ಲಿ ಹೆಚ್ಚು ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಕಾರಣ ರಾಖಿ ಮಾರಾಟ ಮಳಿಗೆಗಳಿಗೆ ಹೆಚ್ಚಿನ ಗ್ರಾಹಕರು ಈ ವಿಶೇಷ ರಾಖಿ ಖರೀದಿಗೆ ಆಗಮಿಸ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವ್ಯಾಪಾರಿ ಮೊಹಮ್ಮದ್ ಆಸಿಫ್, ಕಳೆದ 10 ದಿನಗಳಲ್ಲಿ 100ಕ್ಕೂ ಹೆಚ್ಚು ರಾಖಿಗಳ ಬಾಕ್ಸ್ಗಳು ಮಾರಾಟವಾಗಿವೆ. ಈಗಲೂ ಹೆಚ್ಚಿನ ಆರ್ಡರ್ಗಳು ಬರುತ್ತಿದ್ದು, ಜನರು ಇವುಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಮೋದಿ, ಸಿಎಂ ಯೋಗಿ ಭಾವಚಿತ್ರ ಇರುವ ರಾಖಿಗಳಿಗೂ ಬೇಡಿಕೆ ಇದ್ದು, ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡ್ತಿದ್ದಾರೆಂದು ಹೇಳಿದ್ದಾರೆ.