ಬಲ್ಗೇರಿಯಾ:ಪಶ್ಚಿಮ ಬಲ್ಗೇರಿಯಾದ ಹೆದ್ದಾರಿಯೊಂದರಲ್ಲಿ ಮಂಗಳವಾರ ಬೆಳಗಿನ ಜಾವ ಉತ್ತರ ಮೆಸಿಡೋನಿಯನ್ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ಗೆ ಬೆಂಕಿ ಹೊತ್ತಿಕೊಂಡು 12 ಮಕ್ಕಳು ಸೇರಿದಂತೆ 45 ಜನರು ಸುಟ್ಟು ಕರಕಲಾದ ಹೃದಯವಿದ್ರಾವಕ ಘಟನೆ ನಡೆದಿದೆ.
ಇಸ್ತಾನ್ಬುಲ್ನಿಂದ ಪ್ರವಾಸ ಮುಗಿಸಿಕೊಂಡು ವಾಪಸ್ ಬರುತ್ತಿರುವಾಗ ಸೋಫಿಯಾ ಎಂಬ ಸ್ಥಳದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಸ್ಗೆ ಬೆಂಕಿ ಹೊತ್ತಿಕೊಂಡಿದ್ದಕ್ಕೆ ಕಾರಣ ತಿಳಿದುಬಂದಿಲ್ಲ. ತನಿಖೆ ನಡೆಸಲಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ಸಿಗೆ ಬೆಂಕಿ ಹೊತ್ತಿಕೊಂಡ ವೇಳೆ ಎಚ್ಚೆತ್ತುಕೊಂಡ ಕೆಲವರು ಚಲಿಸುತ್ತಿದ್ದ ಬಸ್ನಿಂದ ಹೊರಗೆ ಜಿಗಿದಿದ್ದಾರೆ. ಈ ವೇಳೆ 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಇಲ್ಲಿನ ಸೋಫಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಳೆಯ ಮಧ್ಯೆಯೂ ಬಸ್ಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಘಟನೆಯಲ್ಲಿ 12 ಮಕ್ಕಳು ಸೇರಿದಂತೆ 45 ಜನರ ದೇಹ ಬೆಂಕಿಗೆ ಸುಟ್ಟು ಕರಕಲಾಗಿವೆ. ದೇಶದಲ್ಲಿಯೇ ನಡೆದ ಭಾರಿ ಪ್ರಮಾಣದ ಬೆಂಕಿ ಅವಘಡ ಇದಾಗಿದೆ ಎಂದು ಅಲ್ಲಿನ ಸಚಿವರೊಬ್ಬರು ಮಾಹಿತಿ ನೀಡಿದ್ದಾರೆ.
ಅಲ್ಲದೇ, ಬಸ್ಗೆ ಬೆಂಕಿ ಹೊತ್ತಿಕೊಳ್ಳುವ ಮೊದಲು ರಸ್ತೆ ವಿಭಜಕ್ಕೆ ಗುದ್ದಿದೆ. ಬಸ್ ಸುಟ್ಟ ರೀತಿ ಭಯಾನಕವಾಗಿದೆ. ನಾನು ಹಿಂದೆಂದೂ ಈ ರೀತಿಯ ಅಪಘಾತವನ್ನು ನೋಡಿಲ್ಲ ಎಂದು ಸಚಿವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
'ಬಸ್ನಲ್ಲಿ ಎಲ್ಲರೂ ನಿದ್ರೆಗೆ ಜಾರಿದ್ದಾಗ ನಸುಕಿನ ವೇಳೆ ಭಾರಿ ಸದ್ದು ಕೇಳಿ ಬಂತು. ಈ ವೇಳೆ ಎದ್ದು ನೋಡಿದಾಗ ಬಸ್ಗೆ ಬೆಂಕಿ ಹೊತ್ತಿಕೊಂಡಿತ್ತು. ನೋಡನೋಡುತ್ತಿದ್ದಂತೆ ಬೆಂಕಿ ಇಡೀ ಬಸ್ ಆವರಿಸಿಕೊಂಡಿತು. ಭಯಗೊಂಡು ಬಸ್ನಿಂದ ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡೆ' ಎಂದು ದುರ್ಘಟನೆಯಲ್ಲಿ ಬದುಕುಳಿದ ಪ್ರಯಾಣಿಕನೊಬ್ಬ ಕಣ್ಣೀರು ಹಾಕಿದ್ದಾನೆ.