ಕುಲು (ಹಿಮಾಚಲಪ್ರದೇಶ) :ಹಿಮಾಚಲ ಪ್ರದೇಶದಲ್ಲಿ ಮಳೆ ಅನಾಹುತಗಳು ಮಾತ್ರ ನಿಂತಿಲ್ಲ. ಕುಲು ಜಿಲ್ಲೆಯ ಅನ್ನಿ ಪಟ್ಟಣದಲ್ಲಿ ಭೂಕುಸಿತದಿಂದ ಹಲವಾರು ಮನೆಗಳು ಏಕಕಾಲದಲ್ಲಿ ನೆಲಸಮವಾಗಿವೆ. ಇದರ ಭಯಾನಕ ವಿಡಿಯೋ ಲಭ್ಯವಾಗಿದೆ. ಗುಡ್ಡದ ಮೇಲೆ ನಿರ್ಮಿಸಲಾಗಿರುವ ಮನೆಗಳು ಧರೆ ಕುಸಿತದಿಂದ ಉದುರಿ ಬೀಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
ಮಳೆ ಬಿದ್ದ ಹಿನ್ನೆಲೆಯಲ್ಲಿ ಅನ್ನಿ ಪಟ್ಟಣದ ಗುಡ್ಡದ ಮೇಲಿದ್ದ ಮನೆಗಳು ಅಪಾಯದಲ್ಲಿರುವುದನ್ನು ಗುರುತಿಸಲಾಗಿತ್ತು. ವಾರದ ಹಿಂದೆಯೇ ಸ್ಥಳೀಯ ಆಡಳಿತ ನೋಟಿಸ್ ನೀಡಿ, ನಿವಾಸಿಗಳನ್ನು ಖಾಲಿ ಮಾಡಿಸಿತ್ತು. ಹೀಗಾಗಿ ಯಾವುದೇ ಸಾವು- ನೋವುಗಳು ದಾಖಲಾಗಿಲ್ಲ. ಘಟನೆಯಲ್ಲಿ 8-10 ಮನೆಗಳು ನಾಶವಾಗಿವೆ. ಇಂದು ಬೆಳಗ್ಗೆ 9.30 ರ ಸುಮಾರಿನಲ್ಲಿ ಈ ಭಾರಿ ಭೂಕುಸಿತ ಸಂಭವಿಸಿದೆ.
ಭೂಕುಸಿತದಿಂದಾಗಿ ಮನೆಗಳು ಸೇರಿದಂತೆ ಹೋಟೆಲ್ ಕೂಡ ನಾಶವಾಗಿದೆ. ಈ ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ ಎಂಬುದು ಸಮಾಧಾನಕರ ಸಂಗತಿ. ಅಪಾಯವನ್ನು ಮನಗಂಡಿದ್ದ ಜಿಲ್ಲಾಡಳಿತ ಇಲ್ಲಿನ ನಿವಾಸಿಗಳನ್ನು ವಾರದ ಹಿಂದೆಯೇ ಸ್ಥಳಾಂತರಿಸಲಾಗಿತ್ತು. ಅವಶೇಷಗಳಡಿ ಮನೆಗಳು ಹೂತು ಹೋಗಿವೆ.
ಸುತ್ತಲಿನ ಜನರಲ್ಲಿ ಭಯದ ವಾತಾವರಣ:ಅನ್ನಿ ಪಟ್ಟಣದ ಹೊಸ ಬಸ್ ನಿಲ್ದಾಣ ಪ್ರದೇಶ ಇದಾಗಿದ್ದು, ಇನ್ನಷ್ಟು ಕಟ್ಟಡಗಳು ಕುಸಿದು ಬೀಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಭೂಕುಸಿತ ಸಂಭವಿಸಿದಾಗ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದರು. ಧರೆ ಜಾರಿದಾಗ ಜನರು ಕಿರುಚಾಡಿದ್ದಾರೆ. ಸುತ್ತಮುತ್ತಲಿನ ಕಟ್ಟಡಗಳು ಮತ್ತು ಮನೆಗಳಿಗೆ ಅಪಾಯವಿದೆ ಎಂದು ಹೇಳಲಾಗುತ್ತಿದೆ. ಮಳೆ ಇದೇ ರೀತಿ ಮುಂದುವರಿದರೆ ಇತರ ಮನೆಗಳೂ ನಾಶವಾಗಲಿವೆ. ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಧಾವಿಸಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ರಾಷ್ಟ್ರೀಯ ಹೆದ್ದಾರಿ-305 ಕೂಡ ಅಸ್ತವ್ಯಸ್ತಗೊಂಡಿದೆ.