ನವದೆಹಲಿ:ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಸದನಗಳನ್ನುದ್ದೇಶಿಸಿ ಮಾಡುವ ಭಾಷಣದ ಬಳಿಕ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಭಾರತದ ವಾರ್ಷಿಕ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆ ಭಾರತದ ಜಿಡಿಪಿ ದರ ಅಳೆಯುವ ಆರ್ಥಿಕ ಸಮೀಕ್ಷೆಯಾಗಿದ್ದು ಕುತೂಹಲ ಮೂಡಿಸಿದೆ. 2023-24 ನೇ ವರ್ಷಕ್ಕೆ ಶೇ.6-6.8 ರಷ್ಟು ಆರ್ಥಿಕ ಬೆಳವಣಿಗೆ ಅಂದಾಜಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ. ಸರ್ಕಾರ ಬೆಳವಣಿಗೆಯ ದರವನ್ನು ಪ್ರಸಕ್ತ ಸಾಲಿನಲ್ಲಿ ಶೇ.6.5 ರ ಆಸುಪಾಸಿನಲ್ಲಿ ನಿರೀಕ್ಷಿಸುತ್ತಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ಈಗಾಗಲೇ ತಿಳಿಸಿದ್ದಾರೆ.
ಸಮೀಕ್ಷೆಯ ಪ್ರಕಾರ, ಬೆಳವಣಿಗೆ ದರ ಮೂರು ವರ್ಷಗಳಲ್ಲೇ ಅತ್ಯಂತ ನಿಧಾನಗತಿಯದ್ದಾಗಿರಲಿದೆ. 2023-24 ರ ಸಾಲಿನಲ್ಲಿ ನಾಮಿನಲ್ ಬೆಳವಣಿಗೆ ಶೇ.11 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಉಳಿದ ಜಾಗತಿಕ ಆರ್ಥಿಕತೆಗಳಿಗೆ ಹೋಲಿಕೆ ಮಾಡಿದಲ್ಲಿ ಏ.1 ರಿಂದ ಪ್ರಾರಂಭವಾಗಲಿರುವ ಹೊಸ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಸ್ಥಿರ, ಬಲಿಷ್ಠವಾಗಿರಲಿದೆ ಎಂದು ಸಮೀಕ್ಷೆಯಲ್ಲಿ ಸರ್ಕಾರ ಹೇಳಲಿದೆ ಎಂದು ಹೇಳಲಾಗುತ್ತಿದೆ. ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ಅವರು ರೂಪಿಸಿದ ಆರ್ಥಿಕ ಸಮೀಕ್ಷೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ನಲ್ಲಿ ಮಂಡಿಸುವರು.
ಬಜೆಟ್ ಅಧಿವೇಶನದಲ್ಲಿ ಮೊದಲಿಗೆ ಇತ್ತೀಚೆಗೆ ನಿಧನರಾದ ಜಲಂಧರ್‌ನ ಹಾಲಿ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ, ಮಾಜಿ ಸಂಸದ ಶರದ್ ಯಾದವ್, ಹಿರಿಯ ತೆಲುಗು ನಟ ಮತ್ತು ಮಾಜಿ ಸಂಸದ ಸತ್ಯನಾರಾಯಣ ಕೈಕಾಳ, ಬಸವನಗೌಡ ಕೋಳೂರ್ ಸೇರಿದಂತೆ ಹಲವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.