ಕರ್ನಾಟಕ

karnataka

ETV Bharat / bharat

ಅಮೃತ ಕಾಲದ ಮೊದಲ ಬಜೆಟ್ ಮೂಲಕ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಭದ್ರ ಅಡಿಪಾಯ: ಮೋದಿ - ಸದೃಢವಾದ ಅಡಿಪಾಯ

ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಬಡವರು, ಮಧ್ಯಮ ವರ್ಗದ ಜನರು ಹಾಗು ರೈತರು ಸೇರಿದಂತೆ ಯುವ ಭಾರತದ ಕನಸುಗಳನ್ನು ಈಡೇರಿಸಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

PM Modi on Union Budget 2023
ಬಜೆಟ್ ಬಗ್ಗೆ ಪ್ರಧಾನಿ ಮೋದಿ ಮಾತು

By

Published : Feb 1, 2023, 3:15 PM IST

Updated : Feb 1, 2023, 4:16 PM IST

ನವದೆಹಲಿ: ಇಂದು ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಿದ ಕೇಂದ್ರ ಸರ್ಕಾರದ 2023ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್​ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಅಮೃತ ಕಾಲದ ಮೊದಲ ಬಜೆಟ್ ಮೂಲಕ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕಲಾಗಿದೆ" ಎಂದು ಪ್ರಧಾನಿ ಬಣ್ಣಿಸಿದ್ದಾರೆ.

ಇದನ್ನೂ ಓದಿ:ಮೋದಿಯವರ ದೂರದೃಷ್ಟಿಯ ಬಜೆಟ್-ನಡ್ಡಾ; ವಿಧಾನಸಭಾ ಚುನಾವಣೆಗಳೇ ಟಾರ್ಗೆಟ್- ಖರ್ಗೆ

"ಈ ಬಜೆಟ್ ಬಡವರು, ಮಧ್ಯಮ ವರ್ಗದ ಜನರು, ರೈತರು ಸೇರಿದಂತೆ ಮಹತ್ವಾಕಾಂಕ್ಷೆಯ ಯುವ ಭಾರತದ ಕನಸುಗಳನ್ನು ಈಡೇರಿಸಲಿದೆ. ದೇಶಕ್ಕಾಗಿ ಪರಂಪರಾಗತವಾಗಿ ದುಡಿಯುತ್ತಿರುವ ವಿಶ್ವಕರ್ಮರು ಈ ದೇಶದ ಸೃಷ್ಟಿಕರ್ತರು. ಮೊದಲ ಬಾರಿಗೆ ವಿಶ್ವಕರ್ಮ ತರಬೇತಿ ಮತ್ತು ಅವರ ಪ್ರೋತ್ಸಾಹಕ್ಕೆ ಸಂಬಂಧಿಸಿದ ಯೋಜನೆಯನ್ನು ಘೋಷಿಸಲಾಗಿದೆ" ಎಂದರು.

ತೆರಿಗೆ ದರ ಕಡಿಮೆ ಮಾಡಿದ್ದೇವೆ: "ನಮ್ಮ ಸರ್ಕಾರವು ಮಧ್ಯಮ ವರ್ಗದವರನ್ನು ಸಬಲೀಕರಣಗೊಳಿಸಲು ಹಾಗೂ ಜೀವನವನ್ನು ಸುಲಭಗೊಳಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ನಾವು ತೆರಿಗೆ ದರವನ್ನು ಕಡಿಮೆ ಮಾಡಿದ್ದೇವೆ. ಅದಕ್ಕೆ ಅನುಗುಣವಾಗಿ ಪರಿಹಾರ ನೀಡಿದ್ದೇವೆ" ಎಂದು ಮೋದಿ ಹೇಳಿದರು.

"ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರ ಜೀವನವನ್ನು ಸುಲಭ, ಸರಳಗೊಳಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ. ಮಹಿಳಾ ಸ್ವಸಹಾಯ ಸಂಘಗಳನ್ನು ಮತ್ತಷ್ಟು ಹೆಚ್ಚಿಸಲು ಕ್ರಮ ವಹಿಸಲಾಗಿದೆ. ತಮ್ಮ ಮನೆಗಳಿಂದಲೇ ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷ ಉಳಿತಾಯ ಯೋಜನೆ ಆರಂಭಿಸಲಾಗಿದೆ" ಎಂದರು.

"ಬಜೆಟ್​ನಲ್ಲಿ ಪರಿಸರ ಮತ್ತು ಹಸಿರೀಕರಣಕ್ಕೆ ಉತ್ತೇಜನ ನೀಡಲಾಗಿದೆ. ಹಸಿರು ಶಕ್ತಿ (Green energy), ಹಸಿರು ಬೆಳವಣಿಗೆ (Green growth) ಮತ್ತು ಹಸಿರು ಮೂಲಸೌಕರ್ಯ (Green infrastructure) ಹಾಗೂ ಹಸಿರು ಉದ್ಯೋಗ (Green jobs)ಗಳನ್ನು ಮತ್ತಷ್ಟು ಸೃಷ್ಟಿಸುವ ಸುಸ್ಥಿರ ಭವಿಷ್ಯವನ್ನು ಬಜೆಟ್​ನಲ್ಲಿ ಘೋಷಿಸಲಾಗಿದೆ. ತಂತ್ರಜ್ಞಾನ ಮತ್ತು ಹೊಸ ಆರ್ಥಿಕತೆಯ ಮೇಲೂ ನಾವು ಗಮನ ಕೇಂದ್ರೀಕರಿಸಿದ್ದೇವೆ" ಎಂದು ಮೋದಿ ವಿವರಿಸಿದರು.

ಮೂಲಸೌಕರ್ಯಕ್ಕೆ 10 ಲಕ್ಷ ಕೋಟಿ:"ಸಮಾಜದಲ್ಲಿನಅವಕಾಶವಂಚಿತರಿಗೆ ಬಜೆಟ್​ನಲ್ಲಿ ಆದ್ಯತೆ ನೀಡಲಾಗಿದೆ. ಮೂಲಸೌಕರ್ಯಗಳಿಗಾಗಿ 10 ಲಕ್ಷ ಕೋಟಿ ರೂಪಾಯಿಗಳ ಅಭೂತಪೂರ್ವ ಹೂಡಿಕೆಯು ಅಭಿವೃದ್ಧಿಗೆ ವೇಗ ಮತ್ತು ಹೊಸ ಶಕ್ತಿಯನ್ನು ನೀಡುತ್ತದೆ. ಅಲ್ಲದೇ, ಈ ಬಜೆಟ್ ಸಹಕಾರಿ ಸಂಸ್ಥೆಗಳು ಮತ್ತು ಗ್ರಾಮೀಣ ಆರ್ಥಿಕತೆಯ ಉತ್ತೇಜನವನ್ನು ಕೇಂದ್ರವಾಗಿರಿಸಿಕೊಂಡಿದೆ" ಎಂದು ತಿಳಿಸಿದರು.

"ಡಿಜಿಟಲ್ ಪಾವತಿಯ ಯಶಸ್ಸು ಕೃಷಿ ವಲಯದಲ್ಲೂ ಪುನರಾವರ್ತಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಬಜೆಟ್‌ನಲ್ಲಿ ನಾವು ಡಿಜಿಟಲ್ ಕೃಷಿ ಮೂಲಸೌಕರ್ಯಕ್ಕಾಗಿ ಯೋಜನೆಯನ್ನೂ ಜಾರಿಗೆ ತಂದಿದ್ದೇವೆ" ಎಂದು ಪ್ರಧಾನಿ ಮೋದಿ ಹೇಳಿದರು. ಇಂದು ಬೆಳಗ್ಗೆ ಲೋಕಸಭೆಯಲ್ಲಿ ಸತತ ಮೂರನೇ ಬಾರಿಗೆ ಕಾಗದ ರಹಿತ ಬಜೆಟ್ ಮಂಡಿಸಲಾಯಿತು. ಅಲ್ಲದೇ, ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಐದನೇ ಬಾರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಯವ್ಯಯ ಮಂಡನೆ ಮಾಡಿದರು.

ಇದನ್ನೂ ಓದಿ:Union Budget 2023: ಹಲವರಿಗೆ ಸಿಹಿ, ಕೆಲವರಿಗೆ ಕಹಿ.. ಯಾವುದು ಅಗ್ಗ? ಯಾವುದು ದುಬಾರಿ? ಇಂದಿನ ಬಜೆಟ್​ನ ಪ್ರಮುಖ ಅಂಶ

Last Updated : Feb 1, 2023, 4:16 PM IST

ABOUT THE AUTHOR

...view details