ಬಾದೌನ್(ಉತ್ತರಪ್ರದೇಶ): ತನ್ನ ವಿರೋಧಿಗಳನ್ನು ಗಂಭೀರ ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರ ನಡೆಸಿದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಸ್ನೇಹಿತನಿಂದ ಅತ್ಯಾಚಾರ ಮಾಡಿಸಿದ್ದಾನೆ. ಇಂಥದ್ದೊಂದು ಹೀನ, ಆಘಾತಕಾರಿ ಕೃತ್ಯ ಉತ್ತರಪ್ರದೇಶದ ಬಾದೌನ್ನಲ್ಲಿ ಬೆಳಕಿಗೆ ಬಂದಿದೆ. ಈ ಸಂಗತಿಯನ್ನು ಸ್ವತ: ಪೊಲೀಸರೇ ತಿಳಿಸಿದ್ದಾರೆ.
ಪ್ರಕರಣದ ವಿವರ: ಈ ಘಟನೆ ಕಳೆದ ಭಾನುವಾರ ನಡೆದಿದೆ. ಗಂಡ ತನ್ನ 22 ವರ್ಷದ ಪತ್ನಿಗೆ ಸುಳ್ಳು ಹೇಳಿ ಬೈಕ್ನಲ್ಲಿ ಕಾಡಿಗೆ ಕರೆದುಕೊಂಡು ಹೋಗಿದ್ದಾನೆ. ನಿರ್ಜನ ಸ್ಥಳ ತಲುಪಿದ ಬಳಿಕ ಅಲ್ಲಿಗೆ ತನ್ನ ಸ್ನೇಹಿತನನ್ನೂ ಕರೆಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಸ್ನೇಹಿತನಿಗೆ ಪತ್ನಿ ಮೇಲೆ ಅತ್ಯಾಚಾರ ಮಾಡುವಂತೆ ಮಾನಗೇಡಿ ಪತಿ ಸೂಚಿಸಿದ್ದಾನೆ.
ಈ ದುಷ್ಕೃತ್ಯಕ್ಕೆ ಬಲಿಯಾದ ಹೆಂಡತಿ ಪತಿಯ ಸ್ನೇಹಿತನಿಂದ ಎರಡು ಬಾರಿ ಅತ್ಯಾಚಾರಕ್ಕೊಳಗಾಗಿದ್ದಾಳೆ. ನಂತರ ಪತಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ಕರೆ ಮಾಡಿ, ಪತ್ನಿ ಮೇಲೆ ಇಬ್ಬರು ಅತ್ಯಾಚಾರ ಎಸಗಿರುವುದಾಗಿ ದೂರು ನೀಡಿದ್ದಾನೆ.