ಚೆನ್ನೈ(ತಮಿಳುನಾಡು):ಐಐಟಿ ಚೆನ್ನೈನಲ್ಲಿ ಮೂರನೇ ವರ್ಷದ ಬಿಟೆಕ್ ಓದುತ್ತಿದ್ದ ಆಂಧ್ರಪ್ರದೇಶ ಮೂಲದ ವೈಪು ಪುಷ್ಪಕ್ ಶ್ರೀಸಾಯಿ ಎಂಬ ವಿದ್ಯಾರ್ಥಿ ಐಐಟಿ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸಹ ವಿದ್ಯಾರ್ಥಿಗಳು ಆತನ ಹಾಸ್ಟೆಲ್ ಕೊಠಡಿಗೆ ತೆರಳಿ ನೋಡಿದಾಗ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಕೊಟ್ಟೂರುಪುರಂ ಪೊಲೀಸರು ಸ್ಥಳಕ್ಕೆ ತೆರಳಿ ವಿದ್ಯಾರ್ಥಿಯ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ರಾಯಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ವಿದ್ಯಾರ್ಥಿಯ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ವಿಚಾರಣೆ ನಡೆಸುತ್ತಿದ್ದಾರೆ.
ಅವರು ಸಾಕಷ್ಟು ವಿಷಯಗಳ ಪರೀಕ್ಷೆಯನ್ನು ಬಾಕಿ ಉಳಿಸಿಕೊಂಡಿದ್ದರು ಮತ್ತು ಕಳೆದ ಎರಡು ತಿಂಗಳಿನಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಆತನ ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಪುಷ್ಬುಕ್‌ನ ಸ್ಮಾರ್ಟ್‌ಫೋನ್ ಅನ್ನು ಸಹ ಪರಿಶೀಲಿಸುತ್ತಿದ್ದಾರೆ. ವಿದ್ಯಾರ್ಥಿ ಪುಷ್ಪಕ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಐಐಟಿಯಲ್ಲಿರುವ ಸಮಿತಿಯು ವಿಸ್ತೃತ ತನಿಖೆ ನಡೆಸಿ ಸ್ಪಷ್ಟ ವರದಿ ನೀಡಲಿದೆ ಎಂದು ಐಐಟಿ ತಿಳಿಸಿದೆ.
ಕೆಲವು ವರ್ಷಗಳ ಹಿಂದೆ ಚೆನ್ನೈ ಐಐಟಿಯಲ್ಲಿ ಕೇರಳದ ಫಾತಿಮಾ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿತ್ತು. ಕಳೆದ ಒಂದು ತಿಂಗಳಲ್ಲಿ ಚೆನ್ನೈನ ಐಐಟಿಯಲ್ಲಿ ಎರಡು ಆತ್ಮಹತ್ಯೆ ಘಟನೆಗಳು ನಡೆದಿವೆ. ವರದಿಗಳ ಪ್ರಕಾರ, ಕಳೆದ ಆರು ವರ್ಷಗಳಲ್ಲಿ ಐಐಟಿ ಚೆನ್ನೈನಲ್ಲಿ ಸುಮಾರು 11 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಪೋಷಕರಲ್ಲಿ ಭಯ ಮೂಡಿಸಿದೆ.
ಇದೇ ವೇಳೆ ಚೆನ್ನೈ ಐಐಟಿ ನಿರ್ದೇಶಕ ಕಾಮಕೋಟಿ ಮಾತನಾಡಿ, ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಪೋಷಕರ ಅಭಿಪ್ರಾಯ ಕೇಳಲಾಗುವುದು ಎಂದು ತಿಳಿಸಿದ್ದಾರೆ.