ಲಖನೌ (ಉತ್ತರಪ್ರದೇಶ):ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಾಗುವುದು ಎಂದು ಘೋಷಿಸಿದ್ದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷೆ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ವಿಪಕ್ಷಗಳ I.N.D.I.A ಕೂಟ ಸೇರುವ ಸಾಧ್ಯತೆ ಇದೆ. ಜನವರಿ 15 ರಂದು ತಮ್ಮ 68ನೇ ಹುಟ್ಟುಹಬ್ಬದಂದು ಇಂಡಿಯಾ ಕೂಟದೊಂದಿಗೆ ಮೈತ್ರಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರಪ್ರದೇಶದಲ್ಲಿ ದಲಿತ ಸಮುದಾಯದ ಮೇಲೆ ಹಿಡಿತ ಹೊಂದಿರುವ ಮಾಯಾವತಿ ಅವರನ್ನು ಮಹಾಘಟಬಂಧನಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕಾಂಗ್ರೆಸ್, ಎಸ್‌ಪಿ ಸೇರಿದಂತೆ ವಿಪಕ್ಷಗಳು ಆಸಕ್ತಿ ತೋರಿಸಿವೆ. ನಾಡಿದ್ದು ಜನ್ಮದಿನದಂದು ಕಾಂಗ್ರೆಸ್ನ ಹಿರಿಯ ನಾಯಕರು ಬಿಎಸ್‌ಪಿ ನಾಯಕಿಯನ್ನು ಭೇಟಿ ಮಾಡಿ ಸೀಟು ಹಂಚಿಕೆ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ಹೇಳಲಾಗಿದ್ದರೆ, ಇತ್ತ ಎಸ್‌ಪಿ ಕೂಡ ಹೇಗಾದರೂ ಮಾಡಿ ದಲಿತ ನಾಯಕಿಯನ್ನು ಮೈತ್ರಿ ಸೇರಿಸಿಕೊಳ್ಳುವ ಬಗ್ಗೆ ಇಚ್ಛೆ ಹೊಂದಿದೆ ಎಂದು ತಿಳಿದುಬಂದಿದೆ.
ಉತ್ತರಪ್ರದೇಶದಲ್ಲಿ ಘಟಬಂಧನ್;ಕಾಂಗ್ರೆಸ್, ಬಿಎಸ್‌ಪಿ, ಎಸ್‌ಪಿ, ರಾಷ್ಟ್ರೀಯ ಲೋಕದಳ, ಅಪ್ನಾ ದಳ, ಕಮೆರವಾಡಿ, ಮಹಾನ್ ದಳ ಮತ್ತು ಆಜಾದ್ ಸಮಾಜ ಪಕ್ಷಗಳು ಒಟ್ಟಾಗಿ ಸೇರಿ ಬಿಜೆಪಿ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಸೆಣಸಲು ತಂತ್ರ ರೂಪಿಸಿವೆ. ಈ ಮೊದಲು ಯಾವುದೇ ಕೂಟದ ಜೊತೆಗೆ ಸೇರಲ್ಲ ಎಂದು ಘೋಷಿಸಿದ್ದ ಬಿಎಸ್ಪಿಯನ್ನು ಇಂಡಿಯಾ ಮೈತ್ರಿಯಲ್ಲಿ ಸೇರಿಸಿಕೊಳ್ಳಲು ಎಸ್‌ಪಿ ನಾಯಕ, ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು ಉತ್ಸುಕತೆ ತೋರಿದ್ದಾರೆ. ಇದಕ್ಕೆ ಕಾಂಗ್ರೆಸ್ ಕೂಡ ಕೈಜೋಡಿಸಿದೆ.