ನವದೆಹಲಿ: ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಬಿಎಸ್ಪಿ ಮೈತ್ರಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಮಾಯಾವತಿ ತಿರುಗೇಟು ನೀಡಿದ್ದಾರೆ. ನಮ್ಮ ಪಕ್ಷದ ಬಗ್ಗೆ ಮಾತನಾಡುವ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೂರು ಬಾರಿ ಯೋಚಿಸಬೇಕೆಂದು ವಾಗ್ದಾಳಿ ನಡೆಸಿದ್ದಾರೆ. ಆಡಳಿತಾರೂಢ ಬಿಜೆಪಿಗೆ ಬಿಎಸ್ಪಿ ಭಯಪಟ್ಟಿದೆ. ಹೀಗಾಗಿ ಚುನಾವಣಾ ಮೈತ್ರಿ ಮತ್ತು ಮುಖ್ಯಮಂತ್ರಿ ಪದವಿಯ ಆಹ್ವಾನ ನೀಡಿದ್ದರೂ ಒಪ್ಪಲಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಅವರು ಆಕ್ರೋಶ ಹೊರಹಾಕಿದರು.
ಸಂಸತ್ತಿನಲ್ಲಿ ಒತ್ತಾಯ ಪೂರ್ವಕವಾಗಿ ಪ್ರಧಾನಿಯನ್ನು ಅಪ್ಪಿಕೊಳ್ಳುವ ರಾಹುಲ್ ಗಾಂಧಿ ನಾಯಕರಂತಹ ಪಕ್ಷ ನಮ್ಮದಲ್ಲ. ಜಗತ್ತಿನಾದ್ಯಂತ ಅಪಹಾಸ್ಯಕ್ಕೆ ಒಳಗಾಗಿರುವ ಪಕ್ಷವೂ ನಮ್ಮದಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮತ್ತು ಅಧಿಕಾರದಲ್ಲಿ ಇಲ್ಲದೇ ಇದ್ದಾಗಲೂ ಏನೂ ಮಾಡಿಲ್ಲ ಎಂದು ಕಿಡಿಕಾರಿದರು.
ಬಿಜೆಪಿ ಮತ್ತು ಆರ್ಎಸ್ಎಸ್ ಕೇವಲ 'ಕಾಂಗ್ರೆಸ್ ಮುಕ್ತ ಭಾರತ' ಮಾಡುವ ಪ್ರಯತ್ನದಲ್ಲಿಲ್ಲ. ಅವರು ತಮ್ಮ 'ವಿರೋಧ ಮುಕ್ತ' ಭಾರತ ಮಾಡಲು ಹೊರಟಿದ್ದಾರೆ. ಚೀನಾದ ರಾಜಕೀಯ ವ್ಯವಸ್ಥೆಯಂತೆ ಗ್ರಾಮದಿಂದ ರಾಷ್ಟ್ರ ಮಟ್ಟದವರೆಗೆ ಒಂದೇ ಪ್ರಬಲ ಪಕ್ಷ ಸ್ಥಾಪಿಸುವ ಗುರಿ ಹೊಂದಿದ್ದಾರೆ. ಕಾಂಗ್ರೆಸ್ ತನ್ನ ದಾರಿಯನ್ನಷ್ಟೇ ಯೋಚಿಸಬಾರದು ಮತ್ತು ತನ್ನ ಮನೆಯಲ್ಲೇ ಕುಳಿತು ನಮ್ಮ ವಿಷಯಗಳ ಬಗ್ಗೆ ಆದೇಶಿಸಬಾರದು. ರಾಹುಲ್ ಗಾಂಧಿ ಹೇಳಿಕೆಯು ದುರುದ್ದೇಶದಿಂದ ಕೂಡಿದೆ ಮತ್ತು ದಲಿತರು ಮತ್ತು ಬಿಎಸ್ಪಿಯನ್ನು ಕೀಳುಮಟ್ಟದಿಂದ ನೋಡುವುದಾಗಿದೆ ಎಂದು ಅವರು ಟೀಕಾ ಪ್ರಹಾರ ಮಾಡಿದ್ದಾರೆ.