ಕರ್ನಾಟಕ

karnataka

ETV Bharat / bharat

ಪಾಕ್ ಗಡಿಯಲ್ಲಿ ಗಣಿಗಾರಿಕೆಗೆ ಬಿಎಸ್‌ಎಫ್ ಆತಂಕ: ಹೈಕೋರ್ಟ್​ಗೆ ಸಲ್ಲಿಸಿದ ವರದಿಯಲ್ಲೇನಿದೆ? - ಅಂತಾರಾಷ್ಟ್ರೀಯ ಗಡಿಯ ಸಮೀಪ ಗಣಿಗಾರಿಕೆ

ಪೊಲೀಸ್ ಪರಿಶೀಲನೆಯಿಲ್ಲದೆ ಪಂಜಾಬ್​ನ​ ಪಠಾಣ್‌ಕೋಟ್ ಮತ್ತು ಗುರುದಾಸ್‌ಪುರದ ಅಂತಾರಾಷ್ಟ್ರೀಯ ಗಡಿಯ ಸಮೀಪ ನೂರಾರು ಕಾರ್ಮಿಕರು ಗಣಿಗಾರಿಕೆಯಲ್ಲಿ ತೊಡಗಿರುವುದು ಭದ್ರತೆಗೆ ದೊಡ್ಡ ಅಪಾಯ ಎಂದು ಬಿಎಸ್‌ಎಫ್ ಕಳವಳ ವ್ಯಕ್ತಪಡಿಸಿದೆ.

bsf-worried-about-mining-in-punjab-border-areas
ಪಾಕ್ ಗಡಿಯಲ್ಲಿ ಗಣಿಗಾರಿಕೆ ಬಗ್ಗೆ ಬಿಎಸ್‌ಎಫ್ ಆತಂಕ: ಹೈಕೋರ್ಟ್​ಗೆ ಸಲ್ಲಿಸಿದ ವರದಿಯಲ್ಲಿ ಏನಿದೆ?

By

Published : Aug 5, 2022, 8:09 PM IST

ಚಂಡೀಗಡ್(ಪಂಜಾಬ್​): ಪಂಜಾಬ್‌ನ ಗಡಿ ಭಾಗಗಳಲ್ಲಿ ನಿರಂತರ ಗಣಿಗಾರಿಕೆ ಬಗ್ಗೆ ಬಿಎಸ್‌ಎಫ್ ಆತಂಕ ವ್ಯಕ್ತಪಡಿಸಿದೆ. ಈ ಸಂಬಂಧ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ವರದಿ ಸಲ್ಲಿಸಲಾಗಿದ್ದು, ದಿನದ 24 ಗಂಟೆಯೂ ಗಣಿಗಾರಿಕೆ ನಡೆಯುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪಾಕ್ ಗಡಿಯಲ್ಲಿ ಗಣಿಗಾರಿಕೆ ಬಗ್ಗೆ ಬಿಎಸ್‌ಎಫ್ ಆತಂಕ: ಹೈಕೋರ್ಟ್​ಗೆ ಸಲ್ಲಿಸಿದ ವರದಿಯಲ್ಲಿ ಏನಿದೆ?

ಗಡಿ ಭಾಗದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಪ್ರಕರಣವು 2012ರಿಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಇದೀಗ ಕುರಿತಂತೆ ಬಿಎಸ್‌ಎಫ್ ಕೂಡ ತನ್ನ ವರದಿಯನ್ನು ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದೆ. ಪಾಕಿಸ್ತಾನದೊಂದಿಗೆ ಹಂಚಿಕೊಂಡಿರುವ ಅಂತಾರಾಷ್ಟ್ರೀಯ ಗಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಪೊಲೀಸ್ ಪರಿಶೀಲನೆಯಿಲ್ಲದೆ ಪಠಾಣ್‌ಕೋಟ್ ಮತ್ತು ಗುರುದಾಸ್‌ಪುರದ ಅಂತಾರಾಷ್ಟ್ರೀಯ ಗಡಿಯ ಸಮೀಪ ನೂರಾರು ಕಾರ್ಮಿಕರು ಗಣಿಗಾರಿಕೆಯಲ್ಲಿ ತೊಡಗಿರುವುದು ಭದ್ರತೆಗೆ ದೊಡ್ಡ ಅಪಾಯ ಎಂದು ಬಿಎಸ್‌ಎಫ್ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸರ್ಕಾರದ ವಕೀಲ ಅರುಣ್ ಗೋಸಾಯಿ ಮಾಹಿತಿ ನೀಡಿದ್ದಾರೆ.

ಬೃಹತ್ ಗಣಿಗಾರಿಕೆಯಿಂದಾಗಿ ಅಂತಾರಾಷ್ಟ್ರೀಯ ಗಡಿಯ ಕೆಲವೆಡೆ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಗಡಿಯಲ್ಲಿ ನಿರಂತರವಾಗಿ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳು ಮತ್ತು ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಆ ಗಣಿಗಾರಿಕೆ ನಡೆಯುವ ಸ್ಥಳಗಳಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮಾದಕ ದ್ರವ್ಯಗಳು ಬೀಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದೂ ಕಳವಳ ವ್ಯಕ್ತಪಡಿಸಲಾಗಿದೆ. ಆದರೆ, ಈ ಗಣಿಗಾರಿಕೆ ಕಾನೂನುಬಾಹಿರವೇ ಎಂಬ ಬಗ್ಗೆ ಬಿಎಸ್‌ಎಫ್ ಏನನ್ನೂ ಹೇಳಿಲ್ಲ.

ಇತ್ತ, ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಂಜಾಬ್ ಸರ್ಕಾರ ಕೂಡ ತನ್ನ ವರದಿಯನ್ನು ಸಲ್ಲಿಸಿದೆ. ಆದರೆ, ಅಕ್ರಮ ಗಣಿಗಾರಿಕೆ ನಿಂತಿದೆಯೇ ಅಥವಾ ಇಲ್ಲವೇ ಎಂಬುದನ್ನು ಮಾತ್ರ ತಿಳಿಸುವಂತೆ ಹೈಕೋರ್ಟ್​​ ಪಂಜಾಬ್ ಸರ್ಕಾರಕ್ಕೆ ಸೂಚಿಸಿದೆ. ಹೀಗಾಗಿ ಪಂಜಾಬ್ ಸರ್ಕಾರ ಆಗಸ್ಟ್ 29ರಂದು ಹೈಕೋರ್ಟ್‌ಗೆ ತನ್ನ ಉತ್ತರವನ್ನು ಸಲ್ಲಿಸಲಿದೆ. ಈ ಗಣಿಗಾರಿಕೆ ವಿಷಯವಾಗಿ ಭಾರತೀಯ ಸೇನೆ ಮತ್ತು ಪರಿಸರ ಮತ್ತು ಅರಣ್ಯ ಸಚಿವಾಲಯ ಕೂಡ ತಮ್ಮ ಉತ್ತರವನ್ನು ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿದೆ.

ಇದನ್ನೂ ಓದಿ:ವಿಶೇಷ ಸ್ಥಾನಮಾನ ರದ್ಧತಿ ಎಫೆಕ್ಟ್: ಕಾಶ್ಮೀರದಲ್ಲಿ ಗಲಭೆ ಪ್ರಕರಣ ಶೇ 88ರಷ್ಟು ಇಳಿಕೆ

ABOUT THE AUTHOR

...view details