ಅಮೃತಸರ(ಪಂಜಾಬ್): ಅಟ್ಟಾರಿ - ವಾಘಾ ಗಡಿಯಲ್ಲಿ ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಪಾಕಿಸ್ತಾನ ಮೂಲದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಹೊಡೆದುರುಳಿಸಿದ್ದಾರೆ. ಮೂಲಗಳ ಪ್ರಕಾರ, ರತನ್ ಖುರ್ದ್ ಪ್ರದೇಶದಲ್ಲಿ ಭಾನುವಾರ ರಾತ್ರಿ 9.45ರ ಸುಮಾರಿಗೆ ಪಾಕಿಸ್ತಾನದ ಡ್ರೋನ್ ಭಾರತದ ಗಡಿ ಪ್ರದೇಶವನ್ನು ದಾಟಿ ಒಳನುಗ್ಗಲು ಯತ್ನಿಸಿದೆ.
ಇದನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಪತ್ತೆ ಹಚ್ಚಿ ಹೊಡೆದುರುಳಿಸಿದ್ದಾರೆ. ಬಳಿಕ ಡ್ರೋನ್ ಪರಿಶೀಲಿಸಿದ ವೇಳೆ 3.2 ಕೆಜಿ ಮಾದಕ ವಸ್ತು ಪತ್ತೆಯಾಗಿದ್ದು ಅದನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಮೂಲಕ ಡ್ರೋನ್ ಮುಖಾಂತರ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುವ ಪಾಕಿಸ್ತಾನದ ಮತ್ತೊಂದು ಪ್ರಯತ್ನವನ್ನು ಬಿಎಸ್‌ಎಫ್ ಪಡೆಗಳು ವಿಫಲಗೊಳಿಸಿವೆ.
ಕಳೆದ ವಾರ ಡ್ರೋನ್ ಹೊಡೆದುರುಳಿಸಿದ್ದ ಭದ್ರತಾ ಪಡೆ:ಒಂದು ವಾರದ ಹಿಂದಷ್ಟೇ ಅಮೃತಸರದಲ್ಲಿ ಗಡಿ ಭದ್ರತಾ ಪಡೆ ಪಾಕಿಸ್ತಾನದ ಡ್ರೋನ್ ಅನ್ನು ವಿಫಲಗೊಳಿಸಿ ಸಾಗಾಟ ಮಾಡಲಾಗುತ್ತಿದ್ದ ಮಾದಕ ವಸ್ತವನ್ನು ವಶ ಪಡಿಸಿಕೊಳ್ಳಲಾಗಿತ್ತು. ಇದರ ಜೊತೆ ಡ್ರೋನ್ಗಳಿಂದ ಸರಕು ಇಳಿಸಿಕೊಳ್ಳುವ ಭಾರತೀಯ ಕಳ್ಳಸಾಗಣೆದಾರನನ್ನು ಬಂಧಿಸಲಾಗಿತ್ತು.
ಬೆಟಾಲಿಯನ್ 22ರ ಜವಾನರು ರಾತ್ರಿ ಸಮಯದಲ್ಲಿ ಅಟ್ಟಾರಿ ಗಡಿಯ ಸಮೀಪದ ಪುಲ್ ಮೊರಾನ್‌ನಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಡ್ರೋನ್ ಹಾರಾಟದ ಶಬ್ದ ಕೇಳಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಯೋಧರು ಡ್ರೋನ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಡ್ರೋನ್ ಸದ್ದು ನಿಂತಿದೆ. ಬಳಿಕ ಜವಾನರು ಪ್ರದೇಶವನ್ನು ಸೀಲ್ ಮಾಡಿ ಹುಡುಕಾಟ ಆರಂಭಿಸಿದ್ದರು. ಆಗ ಸಮೀಪದ ಜಮೀನಿನಲ್ಲಿ ಡಿಜೆಐ ಮ್ಯಾಟ್ರಿಸ್ ಆರ್‌ಟಿಕೆ 300 ಡ್ರೋನ್ ಪತ್ತೆಯಾಗಿತ್ತು. ಆಗ ಡ್ರೋನ್ನಲ್ಲಿ ಯಾವುದೇ ಹೆರಾಯಿನ್ ಸಿಕ್ಕಿರಲಿಲ್ಲ. ಹೀಗಾಗಿ ಯೋಧರು ರಾತ್ರಿ ಸಮಯದಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ಆರಂಭಿಸಿದರು.