ಚಂಡೀಗಢ : ಭಾರತದೊಳಗೆ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುವ ಪಾಕಿಸ್ತಾನಿ ಕಳ್ಳಸಾಗಣೆದಾರರ ಎರಡು ಪ್ರಯತ್ನಗಳನ್ನು ಪಂಜಾಬ್ನ ಅಮೃತಸರದಲ್ಲಿ ಗಡಿ ಭದ್ರತಾ ಪಡೆ ವಿಫಲಗೊಳಿಸಿದೆ. ಅಮೃತಸರ ಸೆಕ್ಟರ್‌ನ ಎರಡು ಸ್ಥಳಗಳಲ್ಲಿ ಪಾಕಿಸ್ತಾನದ ಕಡೆಯಿಂದ ಡ್ರೋನ್ ಮೂಲಕ ಕಳುಹಿಸಲಾದ ಹೆರಾಯಿನ್ ಅನ್ನು ಬಿಎಸ್‌ಎಫ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ ಪಾಕಿಸ್ತಾನದಿಂದ ಬರುತ್ತಿದ್ದ ಡ್ರೋನ್ಗಳಿಂದ ಸರಕು ಇಳಿಸಿಕೊಳ್ಳುವ ಭಾರತೀಯ ಕಳ್ಳಸಾಗಣೆದಾರನನ್ನು ಬಿಎಸ್ಎಫ್ ಬಂಧಿಸಿದೆ.
ಬಿಎಸ್ಎಫ್ ಪ್ರಕಾರ, ಬೆಟಾಲಿಯನ್ 22 ರ ಜವಾನರು ರಾತ್ರಿ ಸಮಯದಲ್ಲಿ ಅಟ್ಟಾರಿ ಗಡಿಗೆ ಸಮೀಪವಿರುವ ಪುಲ್ ಮೊರಾನ್‌ನಲ್ಲಿ ಗಸ್ತು ತಿರುಗುತ್ತಿದ್ದರು. ಬೆಳಗ್ಗೆ 9.35ರ ಸುಮಾರಿಗೆ ಡ್ರೋನ್ ಸದ್ದು ಕೇಳಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಯೋಧರು ಗುಂಡಿನ ದಾಳಿ ಆರಂಭಿಸಿದರು. ಕೆಲವೇ ನಿಮಿಷಗಳಲ್ಲಿ ಡ್ರೋನ್‌ನ ಸದ್ದು ನಿಂತಿತು. ಆದರೆ ಸಮಯ ವ್ಯರ್ಥ ಮಾಡದೆ ಜವಾನರು ಪ್ರದೇಶವನ್ನು ಸೀಲ್ ಮಾಡಿ ಹುಡುಕಾಟ ಆರಂಭಿಸಿದ್ದರು. ಆಗ ಹತ್ತಿರದ ಜಮೀನಿನಲ್ಲಿ ಡಿಜೆಐ ಮ್ಯಾಟ್ರಿಸ್ ಆರ್‌ಟಿಕೆ 300 ಡ್ರೋನ್ ಪತ್ತೆಯಾಗಿದೆ. ಆದರೆ ಇದರೊಂದಿಗೆ ಯಾವುದೇ ಹೆರಾಯಿನ್ ಸಿಕ್ಕಿರಲಿಲ್ಲ. ಹೀಗಾಗಿ ಯೋಧರು ರಾತ್ರಿ ಸಮಯದಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ಆರಂಭಿಸಿದರು.
ನಂತರ ರಾತ್ರಿ ಸಮಯದಲ್ಲಿ ವ್ಯಕ್ತಿಯೊಬ್ಬ ಓಡಿ ಹೋಗುತ್ತಿರುವುದು ಬಿಎಸ್ಎಫ್ ಯೋಧರ ಗಮನಕ್ಕೆ ಬಂದಿದೆ. ಬೆನ್ನಟ್ಟಿ ಆತನನ್ನು ಹಿಡಿದಾಗ ಆತನ ಬಳಿ ಹೆರಾಯಿನ್ನ ಬಾಕ್ಸ್ ಪತ್ತೆಯಾಗಿದೆ. ಆರೋಪಿ ಕಳ್ಳಸಾಗಾಣಿಕೆದಾರನನ್ನು ಕೂಡಲೇ ಯೋಧರು ಬಂಧಿಸಿದ್ದಾರೆ. ಆತನ ಬಳಿಯಿದ್ದ ಸರಕುಗಳನ್ನು ಪರಿಶೀಲಿಸಿದಾಗ ಅದರ ಒಟ್ಟು ತೂಕ 3.5 ಕೆ.ಜಿ. ಆಗಿರುವುದು ಕಂಡು ಬಂದಿದೆ.