ಶ್ರೀಗಂಗಾನಗರ/ತರ್ನ್ ತರಣ್:ಭಾರತಕ್ಕೆ ಹೊಂದಿಕೊಂಡಿರುವ ಪಾಕಿಸ್ತಾನ ಗಡಿಯಲ್ಲಿ ಮಾದಕ ವಸ್ತುಗಳ ಅಕ್ರಮ ಸಾಗಣೆ ಮುಂದುವರೆದಿದೆ. ಪಾಕಿಸ್ತಾನದಿಂದ ಬರುತ್ತಿದ್ದ ಡ್ರೋನ್ ಸೇಮತವಾಗಿ ಅಂದಾಜು 30 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಬಳಿ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಡ್ರೋನ್ ಹಾರಾಟದ ಗಮನಿಸಿ ಬಿಎಸ್‌ಎಫ್ ಯೋಧರು, ಡ್ರೋನ್‌ಗೆ ಗುಂಡು ಹಾರಿಸಿ ಕೆಳಗಡೆ ಬೀಳಿಸಿದ್ದಾರೆ. ಈ ಡ್ರೋಣ್ನಲ್ಲಿ ಮೂರು ಚೀಲಗಳಲ್ಲಿ ಪ್ಯಾಕ್ ಮಾಡಿದ್ದ ಆರು ಕೆಜಿ ತೂಕದ ಹೆರಾಯಿನ್ ಪತ್ತೆಯಾಗಿದೆ. ಈ ಹೆರಾಯಿನ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 30 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಪಾಕ್ ಡ್ರೋನ್ನಿಂದ ಭಾರತದೊಳಗೆ 15 ಕೋಟಿ ಮೌಲ್ಯದ ಹೆರಾಯಿನ್ ಎಸೆತ: ನಾಲ್ವರು ಸ್ಮಗ್ಲರ್ಗಳ ಸೆರೆ
ಮತ್ತೊಂದೆಡೆ ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಕಾಲಿಯಾ ಗ್ರಾಮದ ಗಡಿ ಬಳಿಯ ಡ್ರೋನ್ ಪತ್ತೆಯಾಗಿದೆ. ಇದನ್ನು ಗಮನಿಸಿದ ಬಿಎಸ್‌ಎಫ್‌ನ 101 ಬೆಟಾಲಿಯನ್ ಪಡೆಗಳು ಡ್ರೋನ್‌ಗೆ ಏಳು ಸುತ್ತು ಗುಂಡು ಹಾರಿಸಿದ್ದಾರೆ. ಇದಲ್ಲದೇ, ಪಂಜಾಬ್ ರಾಜ್ಯದ ನಂಬರ್ ಪ್ಲೇಟ್ ಹೊಂದಿರುವ ಕಾರಿನಲ್ಲಿ ಪಂಜಾಬ್‌ನಿಂದ ಬಂದ ಇಬ್ಬರು ಕಳ್ಳಸಾಗಣೆದಾರರು ಭದ್ರತಾ ಪಡೆಗಳನ್ನು ಕಂಡು ಪರಾರಿಯಾಗಿದ್ದಾರೆ. ಆರೋಪಿಗಳು ಕಾರು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡು, ಪರಾರಿಯಾದ ಕಳ್ಳಸಾಗಣೆದಾರರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.