ಕರ್ನಾಟಕ

karnataka

ETV Bharat / bharat

ವರದಕ್ಷಿಣೆಗಾಗಿ ಚಿತ್ರಹಿಂಸೆ.. ನವವಿವಾಹಿತೆಯ ಕೈ ಕತ್ತರಿಸಿ ವಿಡಿಯೋ ಕಳಿಸಿದ ದುರುಳರು - Chhapra Bihar

ಬಿಹಾರದ ಛಪ್ರಾದಲ್ಲಿ ವರದಕ್ಷಿಣೆಗಾಗಿ ಭೀಕರವಾಗಿ ಕೊಲೆ ಮಾಡಲಾಗಿದ್ದು, ಕೊಲೆಗೂ ಮುನ್ನ ನವವಿವಾಹಿತೆಗೆ ಚಿತ್ರಹಿಂಸೆ ನೀಡಿದ ರೀತಿ ತಿಳಿದು ಪೊಲೀಸರಿಗೂ ಸಹ ಶಾಕ್​ ಆಗಿದೆ.

Murder Of Bride For Dowry In Chhapra
ವರದಕ್ಷಿಣೆಗಾಗಿ ನವವಿವಾಹಿತೆಯ ಬರ್ಬರ ಹತ್ಯೆ

By

Published : Dec 10, 2022, 8:37 PM IST

ಛಾಪ್ರಾ(ಬಿಹಾರ): ಬಿಹಾರದ ಛಪ್ರಾದಲ್ಲಿ ನಡೆದ ಭೀಕರ ಕೊಲೆಯೊಂದು ಸಂಚಲನ ಮೂಡಿಸಿದೆ. ವರದಕ್ಷಿಣೆಗಾಗಿ ಕೊಲೆ ಮಾಡಲಾಗಿದ್ದು, ಕೊಲೆಗೂ ಮುನ್ನ ನವವಿವಾಹಿತೆಗೆ ಚಿತ್ರಹಿಂಸೆ ನೀಡಿದ ರೀತಿ ತಿಳಿದು ಪೊಲೀಸರಿಗೂ ಸಹ ಆಘಾತವಾಗಿದೆ.

ಈ ಘಟನೆ ಮಾಂಝಿ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್‌ಪುರ ಗ್ರಾಮದಲ್ಲಿ ನಡೆದಿದ್ದು, ಮೃತಳನ್ನು ತಾಜ್‌ಪುರ ಸೇಲಂಪುರ ನಿವಾಸಿ ಪಂಕಜ್ ಮಹತೋ ಅವರ ಪತ್ನಿ ಕಾಜಲ್ ದೇವಿ ಎಂದು ಗುರುತಿಸಲಾಗಿದೆ.

ಮೃತಳ ತಂದೆ ಹೇಳುವ ಪ್ರಕಾರ.., ವಾರದ ಹಿಂದೆ ವರದಕ್ಷಿಣೆಗಾಗಿ ಮಗಳ ಕೈಯನ್ನು ಕಡಿಯಲಾಗಿತ್ತು. ಕೈ ಕತ್ತರಿಸುವ ವಿಡಿಯೋ ಕೂಡ ಮಾಡಿ ಕಳುಹಿಸಿದ್ದರು. ಅಷ್ಟರಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ಮಗಳು ಇದೀಗ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಕಣ್ಣೀರು ಹಾಕಿದರು.

ನಾಲ್ಕು ದಿನದಿಂದ ನಾಪತ್ತೆ: ಮಾಹಿತಿ ಪ್ರಕಾರ ಮೃತ ಕಾಜಲ್ ದೇವಿಯನ್ನು 8 ತಿಂಗಳ ಹಿಂದೆ ತಾಜಪುರ ಸೇಲಂಪುರ ನಿವಾಸಿ ಪಂಕಜ್ ಮಹತೋ ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಮದುವೆಯಾದಾಗಿನಿಂದ ಪತಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ. ಸುಮಾರು ಒಂದು ವಾರದ ಹಿಂದೆ, ಮೃತಳ ತಂದೆ ಮತ್ತು ತಾಯಿಯ ಚಿಕ್ಕಪ್ಪನಿಗೆ ವಿಡಿಯೋವೊಂದು ದೊರೆತಿದೆ. ಅದರಲ್ಲಿ ಕಾಜಲ್ ದೇವಿ ಕೈ ಕತ್ತರಿಸುವ ಭೀಕರ ದೃಶ್ಯ ಕಂಡುಬಂದಿದೆ. ನಂತರ ನಾಲ್ಕು ದಿನಗಳ ಹಿಂದೆ ಮೃತ ಕಾಜಲ್​ ದೇವಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಹಣದೊಂದಿಗೆ ಪರಾರಿಯಾಗಿದ್ದಾಳೆ ಎಂದು ಆಕೆಯ ಅತ್ತೆ ಆರೋಪಿಸಿದ್ದರು. ಈ ವೇಳೆ ತಾಜಪುರ ಗ್ರಾಮದ ಕೆರೆಯಲ್ಲಿ ಆಕೆಯ ಮೃತದೇಹ ತೇಲುತ್ತಿರುವುದನ್ನು ಗ್ರಾಮಸ್ಥರು ನೋಡಿದ್ದಾರೆ.

ಅತ್ತೆಯ ಮೇಲೆ ಕೊಲೆ ಆರೋಪ: ಕಾಜಲ್ ಶವ ಪತ್ತೆಯಾದ ಬಗ್ಗೆ ಪೊಲೀಸರು ಹಾಗೂ ಆಕೆಯ ಕುಟುಂಬಸ್ಥರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮಾಂಝಿ ಠಾಣೆಯ ಪೊಲೀಸರು ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತಳ ಸಂಬಂಧಿಕರು ದೂರು ದಾಖಲಿಸಿದ್ದು, ಅತ್ತೆ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿಂದೆ ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡಿ ತಮ್ಮ ಮಗಳ ಕೈಗಳನ್ನು ಕತ್ತರಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಡಿಎಸ್​ಪಿ ಎಂಪಿ ಸಿಂಗ್ ಸದರ್ ಅವರು ಮಾತನಾಡಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೊಲೆಯಾಗಿದೆ ಎಂದು ಆರೋಪಿಸಿ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಆಸ್ತಿ ವಿವಾದ; ನಟಿ ವೀಣಾ ಕಪೂರ್​ ಹತ್ಯೆ ಮಾಡಿದ ಮಗ

ABOUT THE AUTHOR

...view details