ನವದೆಹಲಿ/ಹೈದರಾಬಾದ್: ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಬಿಆರ್‌ಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯೆ ಕವಿತಾ ಇಂದು ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದ ವಿಚಾರಣೆಗೆ ಹಾಜರಾಗಿದ್ದಾರೆ. ಶನಿವಾರ ಬೆಳಗ್ಗೆ 11.30ರ ಸುಮಾರಿಗೆ ಇಡಿ ಅಧಿಕಾರಿಗಳ ಮುಂದೆ ಹಾಜರಾದ ಕವಿತಾರನ್ನು ಸಂಜೆಯವರೆಗೂ ವಿಚಾರಣೆಗೆ ಒಳಪಡಿಸಲಾಗಿದೆ.
ಮದ್ಯ ನೀತಿ ಹಗರಣದಲ್ಲಿ ಇಡಿ ಅಧಿಕಾರಿಗಳು ಕೆಲ ದಿನಗಳ ಹಿಂದೆ ಕವಿತಾ ಅವರಿಗೆ ಸಮನ್ಸ್ ಜಾರಿ ಮಾಡಿದ್ದರು. ಈ ನಿಟ್ಟಿನಲ್ಲಿ ಕಳೆದ ಮೂರು ದಿನಗಳಿಂದ ದೆಹಲಿಯಲ್ಲೇ ಇರುವ ಕವಿತಾ ಇಂದು ವಿಚಾರಣೆಗೆ ಹಾಜರಾದರು. ಇಡಿ ಕಚೇರಿ ಒಳಗೆ ಪ್ರವೇಶಿಸುವ ಮುನ್ನ ಕವಿತಾ ಎಲ್ಲರಿಗೂ ನಮಸ್ಕರಿಸಿದರು. ಈ ವೇಳೆ, ಸಚಿವ ಶ್ರೀನಿವಾಸ್ ಗೌಡ್ ಕೂಡ ಇದ್ದರು. ಅರುಣ್ ಪಿಳ್ಳೈ ಸೇರಿದಂತೆ ಈಗಾಗಲೇ ಬಂಧಿತರಾಗಿರುವ ಒಂಬತ್ತು ಮಂದಿಯೊಂದಿಗೆ ಕವಿತಾ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಕವಿತಾ ವಿಚಾರಣೆಗೆ ಹಾಜರಾದ ಹಿನ್ನೆಲೆಯಲ್ಲಿ ಇಡಿ ಕಚೇರಿ ಮುಂದೆ ಬಿಆರ್‌ಎಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಜಮಾಯಿಸಿದ್ದರು. ಹೀಗಾಗಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಯಾರೂ ಒಳಹೋಗದಂತೆ ತಡೆಯಲು ಎಲ್ಲೆಂದರಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಇದಕ್ಕೂ ಮುನ್ನ ಕವಿತಾ ದೆಹಲಿಯ ತುಘಲಕ್ ರಸ್ತೆಯಲ್ಲಿರುವ ತಮ್ಮ ತಂದೆ ಕೆ.ಚಂದ್ರಶೇಖರ್ ರಾವ್ ನಿವಾಸದಿಂದ ಇಡಿ ಕಚೇರಿಗೆ ಆಗಮಿಸಿದರು. ನಿವಾಸಕ್ಕೆ ಪಕ್ಷದ ಮುಖಂಡರು ಭೇಟಿ ಬೆಂಬಲ ಸೂಚಿಸಿ, ಘೋಷಣೆಗಳು ಮೊಳಗಿಸಿದರು.
ಕೆಸಿಆರ್ ಎಚ್ಚರಿಕೆ: ಮತ್ತೊಂದೆಡೆ, ತೆಲಂಗಾಣ ಸಚಿವ ಮತ್ತು ಕವಿತಾ ಸಹೋದರ ಕೆಟಿ ರಾಮರಾವ್ ಮತ್ತು ಕವಿತಾ ಮದ್ಯ ನೀತಿ ಹಗರಣದಲ್ಲಿ ಮುಂದಿನ ನಡೆ ಬಗ್ಗೆ ಶುಕ್ರವಾರ ಮಧ್ಯರಾತ್ರಿಯವರೆಗೂ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿದರು. ಇದೇ ವೇಳೆ ಹೈದರಾಬಾದ್ನಲ್ಲಿ ಬಿಆರ್‌ಎಸ್ ಅಧ್ಯಕ್ಷ ಮತ್ತು ತೆಲಂಗಾಣ ಸಿಎಂ ಕೆಸಿಆರ್, ಕೇಂದ್ರದ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.