ಹೈದರಾಬಾದ್ (ತೆಲಂಗಾಣ): ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಆಡಳಿತಾರೂಢ ಬಿಆರ್‌ಎಸ್( ಭಾರತ್ ರಾಷ್ಟ್ರ ಸಮಿತಿ)ಗೆ ತೀವ್ರ ಹಿನ್ನಡೆಯಾಗಿದೆ. ಇದರ ಬೆನ್ನಲ್ಲೇ ಬಿಆರ್‌ಎಸ್ ನಾಯಕ ಕೆ ಟಿ ರಾಮರಾವ್ ತಮ್ಮ ಪಕ್ಷದ ಫಲಿತಾಂಶದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕೆಟಿಆರ್, ಬಿಆರ್‌ಎಸ್ ಪಕ್ಷಕ್ಕೆ ಸತತ ಎರಡು ಅವಧಿಯ ಸರ್ಕಾರವನ್ನು ನೀಡಿದ್ದಕ್ಕಾಗಿ ತೆಲಂಗಾಣ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇಂದಿನ ಫಲಿತಾಂಶದಿಂದ ಬೇಸರವಾಗಿಲ್ಲ. ಆದರೆ ಈ ಫಲಿತಾಂಶವನ್ನು ನಿರೀಕ್ಷಿಸಿಲ್ಲದಿದ್ದುದರಿಂದ ಖಂಡಿತವಾಗಿಯೂ ನಿರಾಶೆಯಾಗಿದೆ. ನಾವು ಇದನ್ನು ಪರಿಗಣಿಸಿ ಮತ್ತೆ ಪುಟಿದೇಳುತ್ತೇವೆ. ಜನಾದೇಶವನ್ನು ಪಡೆದ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು. ನಿಮಗೆ ಶುಭವಾಗಲಿ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಕಾಂಗ್ರೆಸ್ 63 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಆರ್‌ಎಸ್ 40ಕ್ಕೆ ಕುಸಿದಿದೆ. ಬಿಜೆಪಿ 8 ಸ್ಥಾನ, ಎಐಎಂಐಎಂ 7 ಸ್ಥಾನ, ಸಿಪಿಐ 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.
ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ :ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿರುವ ಬೆನ್ನಲ್ಲೇ ಹೈದರಾಬಾದ್ನ ಕಾಂಗ್ರೆಸ್ ಕಚೇರಿಗೆ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಆಗಮಿಸಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ರೇವಂತ್ ರೆಡ್ಡಿ ಪರ ಘೋಷಣೆ ಕೂಗಿದರು. ಕಾಂಗ್ರೆಸ್ ಗೆಲುವು ಖಚಿತವಾಗುತ್ತಲೇ ರೇವಂತ್ ರೆಡ್ಡಿ ರೋಡ್ ಶೋ ನಡೆಸಿದರು. ಈ ವೇಳೆ ಪಕ್ಷದ ಕಾರ್ಯಕರ್ತರು ಜಯಘೋಷ ಕೂಗಿದರು. ರೋಡ್ ಶೋ ಸಂದರ್ಭ ಅಪಾರ ಸಂಖ್ಯೆಯ ಕಾರ್ಯಕರ್ತರು ನೆರೆದಿದ್ದರು. ಇದಕ್ಕೂ ಮುನ್ನ ತೆಲಂಗಾಣ ಡಿಜಿಪಿ ಅಂಜನಿಕುಮಾರ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಹೈದರಾಬಾದ್ನಲ್ಲಿರುವ ರೇವಂತ್ ರೆಡ್ಡಿ ಮನೆಗೆ ಭೇಟಿ ನೀಡಿ, ಅಭಿನಂದಿಸಿದ್ದರು.