ನವದೆಹಲಿ:ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪುತ್ರಿ, ಬಿಆರ್‌ಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯೆ ಕವಿತಾ ಇಂದು ಜಾರಿ ನಿರ್ದೇಶನಾಲಯ (ಇಡಿ)ದ ವಿಚಾರಣೆಗೆ ಹಾಜರಾಗಿಲ್ಲ. ದೆಹಲಿ ಮದ್ಯ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳ ಮುಂದೆ ಇಂದು ಕವಿತಾ ಹಾಜರಾಗಬೇಕಿತ್ತು. ಆದರೆ, ಆರೋಗ್ಯದ ಕಾರಣದಿಂದ ಹಾಜರಾಗಲು ಸಾಧ್ಯವಿಲ್ಲ ಎಂದು ಬಿಆರ್‌ಎಸ್ ನಾಯಕಿ ಇಡಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಹೊಸ ಮದ್ಯ ನೀತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದರಲ್ಲಿ ಅಕ್ರಮ ನಡೆದಿರುವ ಆರೋಪಗಳು ಕೇಳಿ ಬಂದಿವೆ. ತೆಲಂಗಾಣ ಸಿಎಂ ಕೆಸಿಆರ್ ಪುತ್ರಿಯಾಗಿರುವ ಕವಿತಾ ಕಿಕ್ಬ್ಯಾಕ್ ಪಡೆದ ಆರೋಪ ಎದುರಿಸುತ್ತಿದ್ದಾರೆ. ಮದ್ಯ ನೀತಿಯ ವಂಚನೆಯ ಸಮಯದಲ್ಲಿ ಬಿಆರ್‌ಎಸ್ ನಾಯಕಿ ಕವಿತಾ ಅನೇಕ ಮೊಬೈಲ್ ಫೋನ್ ಕರೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಅಲ್ಲದೇ, ಕವಿತಾ ಬೇನಾಮಿ ಸಂಸ್ಥೆ ಹೊಂದಿದ್ದಾರೆ ಎಂಬ ಆರೋಪವೂ ಇದೆ. ಇದರ ಸಂಬಂಧ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರನ್ ಪಿಳ್ಳೈ ಎಂಬುವರನ್ನು ಇಡಿ ಅಧಿಕಾರಿಗಳು ಈಗಾಗಲೇ ಬಂಧಿಸಿದ್ದಾರೆ.
ಇದೀಗ ಈ ಹಗರಣಕ್ಕೆ ಸಂಬಂಧಿಸಿದ ವಹಿವಾಟುಗಳ ಬಗ್ಗೆ ಕವಿತಾ ಅವರನ್ನು ತನಿಖಾ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಮಾರ್ಚ್ 11ರಂದು ಒಂಬತ್ತು ಗಂಟೆಗಳ ಕಾಲ ಕವಿತಾ ಇಡಿ ವಿಚಾರಣೆ ಎದುರಿಸಿದ್ದರು. ಅಲ್ಲದೇ, ಇಂದು ಕೂಡ ಇಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ, ಇಂದಿನ ವಿಚಾರಣೆಯಿಂದ ಅವರು ದೂರ ಉಳಿದಿದ್ದಾರೆ.
ಕಾರಣವೇನು?: ಅನಾರೋಗ್ಯದ ಕಾರಣ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಇರುವ ಕಾರಣ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಇಡಿ ಅಧಿಕಾರಿಗಳಿಗೆ ಕವಿತಾ ಮೇಲ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇಡಿ ಮುಂದೆ ಮುಂದೆ ಇನ್ನೊಂದು ದಿನ ವಿಚಾರಣೆಗೆ ಹಾಜರಾಗುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ತಮ್ಮ ನಿವಾಸಕ್ಕೆ ಬಂದು ಅಧಿಕಾರಿಗಳು ತನಿಖೆ ನಡೆಸಬೇಕೆಂದು ವಕೀಲರ ಮೂಲಕ ಕೇಳಿಕೊಂಡಿದ್ದಾರೆ. ಇಡಿ ಅಧಿಕಾರಿಗಳು ಕೇಳಿದ ದಾಖಲೆಗಳನ್ನು ತಮ್ಮ ವಕೀಲ ಭರತ್ ಮೂಲಕ ಕವಿತಾ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.