ಹೈದರಾಬಾದ್ (ತೆಲಂಗಾಣ):ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ರಾವ್ ಅವರ ಪುತ್ರಿ, ಎಂಎಲ್ಸಿ ಕವಿತಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ನಡೆಸುತ್ತಿರುವುದು ಬಿಆರ್‌ಎಸ್ ಮತ್ತು ಬಿಜೆಪಿ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಬಿಆರ್‌ಎಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರನ್ನು ಗುರಿಯಾಗಿಸಿ ಪೋಸ್ಟರ್ ವಾರ್ ಆರಂಭಿಸಿದ್ದಾರೆ.
ಹೈದರಾಬಾದ್‌ನ ಎರಡು ಸ್ಥಳಗಳಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಚಿತ್ರವುಳ್ಳ ಪೋಸ್ಟರ್‌ಗಳನ್ನು ಅಂಟಿಸಿದ್ದು, 'ಕಾಣೆಯಾಗಿದ್ದಾರೆ' ಎಂದು ತಲೆಬರಹ ನೀಡಲಾಗಿದೆ. ಅಲ್ಲದೆ, "ಶಾಸಕರನ್ನು ಖರೀದಿ ಮಾಡುವಲ್ಲಿ ಈತ ಸಿದ್ಧಹಸ್ತ. ಈತನನ್ನು ಹುಡುಕಿಕೊಟ್ಟಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 15 ಲಕ್ಷ ರೂಪಾಯಿ ಭರವಸೆ ನೀಡಿದ್ದಾರೆ" ಎಂದು ಗೇಲಿ ಮಾಡಲಾಗಿದೆ.
ಇದನ್ನು ಓದಿ:ದೆಹಲಿ ಮದ್ಯ ನೀತಿ ಹಗರಣ: ಇಂದು ಇಡಿ ವಿಚಾರಣೆಗೆ ಹಾಜರಾಗದ ಕೆಸಿಆರ್ ಪುತ್ರಿ ಕವಿತಾ
ಅಮಿತ್ ಶಾಗೂ ಗೇಲಿ ಪೋಸ್ಟರ್:ಕೆಲವು ದಿನಗಳ ಹಿಂದೆ, ಸಿಐಎಸ್‌ಎಫ್ ಸಂಸ್ಥಾಪನಾ ದಿನದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೈದರಾಬಾದ್‌ಗೆ ಭೇಟಿ ನೀಡುವ ಮೊದಲು, ಬಿಆರ್‌ಎಸ್ ಕಾರ್ಯಕರ್ತರು ವ್ಯಂಗ್ಯ ಪೋಸ್ಟರ್ ಮೂಲಕ ಸ್ವಾಗತ ಬ್ಯಾನರ್ ಹಾಕಿದ್ದರು. ಬೇರೆ ಬೇರೆ ಪಕ್ಷಗಳಿಂದ ಬಿಜೆಪಿ ಸೇರ್ಪಡೆಗೊಂಡ ನಾಯಕರು, ವಿವಿಧ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ನಾಯಕರ ಫೋಟೋವನ್ನು ಡಿಟರ್ಜೆಂಟ್ ಪೌಡರ್ ಬ್ರಾಂಡ್ ಆದ ನಿರ್ಮಾ ಹುಡುಗಿಯ ಮುಖಕ್ಕೆ ಅಂಟಿಸಿ ಗೇಲಿ ಮಾಡಿದ್ದರು.