ಹೈದರಾಬಾದ್ (ತೆಲಂಗಾಣ): ಕಳೆದ 10 ವರ್ಷಗಳಲ್ಲಿ ತೆಲಂಗಾಣಕ್ಕೆ ಆಡಳಿತಾರೂಢ ಬಿಆರ್‌ಎಸ್ ಏನು ಮಾಡಿದೆ ಎಂಬುದನ್ನು ಹೇಳಬೇಕೆಂದು ಆಗ್ರಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಆರ್‌ಎಸ್, ಬಿಜೆಪಿ ಮತ್ತು ಎಐಎಂಐಎಂ ಪಕ್ಷಗಳು ಒಟ್ಟಾಗಿ ಸೇರಿಕೊಂಡು ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಕುತಂತ್ರ ನಡೆಸಿವೆ ಎಂದು ವಾಗ್ದಾಳಿ ನಡೆಸಿದರು.
119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ಚುನಾವಣೆ ನಡೆಯಲಿದೆ. ಇಂದು ಸಂಗಾರೆಡ್ಡಿ ಜಿಲ್ಲೆಯ ಆಂಧೋಲ್‌ನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ತೆಲಂಗಾಣಕ್ಕೆ ಕಾಂಗ್ರೆಸ್ ಏನು ಮಾಡಿದೆ ಎಂದು ಸಿಎಂ ಕೆಸಿಆರ್ ಪ್ರಶ್ನಿಸುತ್ತಿದ್ದಾರೆ. ರಾಜ್ಯಕ್ಕೆ ಏನು ಮಾಡಿದೆ ಎಂದು ಹೇಳಬೇಕಿರುವುದು ಕಾಂಗ್ರೆಸ್ ಅಲ್ಲ. ತೆಲಂಗಾಣಕ್ಕೆ ಬಿಆರ್‌ಎಸ್ ಏನು ಮಾಡಿದೆ ಹೇಳಬೇಕೆಂದು ಒತ್ತಾಯಿಸಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ತಾವು ಏನು ಮಾಡುತ್ತೇವೆ ಎಂಬುದನ್ನೂ ಜನತೆಗೆ ವಿವರಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೊರೆಗಳ ಸರ್ಕಾರಕ್ಕೂ, ಜನಸಾಮಾನ್ಯರ ಸರ್ಕಾರಕ್ಕೂ ವ್ಯತ್ಯಾಸ ತೋರಿಸುತ್ತೇವೆ. ಆರು ಗ್ಯಾರಂಟಿಗಳನ್ನು ಜಾರಿಗೊಳಿಸಿ ಜನಪರ ಆಡಳಿತ ನೀಡುತ್ತೇವೆ. ತಮ್ಮ ಹತ್ತು ವರ್ಷಗಳಲ್ಲಿ ಬಿಆರ್‌ಎಸ್ ಏನು ಮಾಡಿದೆ ಎಂದು ಕೆಸಿಆರ್ ತಿಳಿಸುವರೇ ಎಂದು ಕಾಂಗ್ರೆಸ್ ಸಂಸದ ರಾಹುಲ್ ಸವಾಲು ಹಾಕಿದರು. ಇದೇ ವೇಳೆ, ಬಿಆರ್ ಎಸ್ ಮತ್ತು ಬಿಜೆಪಿ ನಡುವೆ ಉತ್ತಮ ಸ್ನೇಹವಿದೆ. ದೆಹಲಿಯಲ್ಲಿ ಮೋದಿಗೆ ಕೆಸಿಆರ್ ಹಾಗೂ ತೆಲಂಗಾಣದಲ್ಲಿ ಕೆಸಿಆರ್ಗೆ ಮೋದಿ ಸಹಾಯ ಮಾಡುತ್ತಾರೆ ಎಂದು ದೂರಿದರು.
ಇದನ್ನೂ ಓದಿ:ಬಿಆರ್‌ಎಸ್, ಕಾಂಗ್ರೆಸ್ನಿಂದ ಜನತೆ ಮುಕ್ತಿ ಬಯಸಿದ್ದಾರೆ, ತೆಲಂಗಾಣದಲ್ಲಿ ಬಿಜೆಪಿ ಗೆಲ್ಲಲಿದೆ: ಪಿಎಂ ಮೋದಿ
ತೆಲಂಗಾಣದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು: ತೆಲಂಗಾಣಕ್ಕಾಗಿ ಹುತಾತ್ಮರಾದ ಹೋರಾಟಗಾರರ ಕುಟುಂಬಕ್ಕೆ 2250 ಚದರಡಿ ನಿವೇಶನ ನೀಡಲಾಗುವುದು. ಪ್ರತಿ ಮಂಡಲದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದೊಂದಿಗೆ ಶಾಲೆಗಳನ್ನು ನಿರ್ಮಿಸಲಾಗುವುದು. ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳಿಗೆ 5 ಲಕ್ಷ ರೂ.ಗಳ ಯುವಜನ ವಿಕಾಸ್ ಯೋಜನೆ ಅನುಷ್ಠಾನಗೊಳಿಸಲಾಗುವುದು. ಈ ಹಣವನ್ನು ಯುವಕರು ಓದಲು ಬಳಸಬಹುದು ಹಾಗೂ ಕೋಚಿಂಗ್ ತೆಗೆದುಕೊಳ್ಳಲು ಕೂಡ ಉಪಯೋಗವಾಗುತ್ತದೆ. ರೈತರಿಗೆ ಪ್ರತಿ ಎಕರೆಗೆ 15 ಸಾವಿರ ರೂ.ನಂತೆ ಆರ್ಥಿಕ ನೆರವು ನೀಡಲಾಗುವುದು. 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡಲಾಗುವುದು. ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2,500 ರೂ. ಜಮೆ ಮಾಡಲಾಗುವುದು. ಭೂರಹಿತ ಕೃಷಿ ಕೂಲಿಕಾರರಿಗೆ ವರ್ಷಕ್ಕೆ 12 ಸಾವಿರ ರೂ. ನೆರವು ಕಲ್ಪಿಸಲಾಗುವುದು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಕಾಳೇಶ್ವರಂ ಯೋಜನೆಯಲ್ಲಿ ಲಕ್ಷ ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ. ಭೂಮಿ, ಮರಳು, ಗಣಿ, ವೈನ್ ಎಲ್ಲವೂ ಕೆಸಿಆರ್ ಕುಟುಂಬದ ಕೈಯಲ್ಲಿದೆ. ಬಡವರ ಜಮೀನು ಕಿತ್ತುಕೊಳ್ಳಲಾಗಿದೆ. ಬಿಆರ್‌ಎಸ್ ಆಡಳಿತದಲ್ಲಿ 8 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿದ ಅವರು, ನಾನು ಹೈದರಾಬಾದ್‌ನ ಅಶೋಕನಗರದಲ್ಲಿರುವ ಕೇಂದ್ರ ಗ್ರಂಥಾಲಯಕ್ಕೆ ಶನಿವಾರ ರಾತ್ರಿ ಹೋಗಿದ್ದೆ. ಅಲ್ಲಿನ ನಿರುದ್ಯೋಗಿಗಳೊಂದಿಗೆ ಮಾತನಾಡಿ ಸಮಸ್ಯೆಗಳನ್ನು ತಿಳಿದುಕೊಂಡಿದ್ದೇನೆ. ರಾಜ್ಯದಲ್ಲಿ ಪ್ರಶ್ನೆಪತ್ರಿಕೆಗಳ ಸೋರಿಕೆಯಿಂದ ಯುವಕರು ಸಾಕಷ್ಟು ನೊಂದಿದ್ದಾರೆ. ದುಡ್ಡು ಖರ್ಚು ಮಾಡಿ ಪರೀಕ್ಷೆಗೆ ತಯಾರಿ ನಡೆಸಿದರೆ ಪರೀಕ್ಷೆ ರದ್ದಾಗಿದೆ ಎಂಬುದಾಗಿ ರಾಜ್ಯದಲ್ಲಿ ನೊಂದುಕೊಳ್ಳುತ್ತಿದ್ದಾರೆ ಎಂದು ರಾಹುಲ್ ವಿವರಿಸಿದರು.
ಇದನ್ನೂ ಓದಿ:ಕರ್ನಾಟಕ ಚುನಾವಣಾ ಫಲಿತಾಂಶವೇ ತೆಲಂಗಾಣದಲ್ಲೂ ಬರಲಿದೆ: ಹೈದರಾಬಾದ್ನಲ್ಲಿ ಡಿಕೆಶಿ ವಿಶ್ವಾಸ