ಬಲರಾಮ್ಪುರ (ಉತ್ತರ ಪ್ರದೇಶ): ಹಾವಿನ ಕಡಿತದಿಂದ ಸಾವನ್ನಪ್ಪಿದ್ದ ಅಣ್ಣನ ಅಂತ್ಯಸಂಸ್ಕಾರ ಮಾಡಲೆಂದು ಹೋದ ತಮ್ಮನೂ ಹಾವು ಕಚ್ಚಿ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಬಲರಾಮ್ಪುರದಲ್ಲಿ ನಡೆದಿದೆ.
ಇಲ್ಲಿನ ಭವಾನಿಪುರ ಗ್ರಾಮದಲ್ಲಿ ಮಂಗಳವಾರ ಅರವಿಂದ್ ಮಿಶ್ರಾ (38) ಹಾವು ಕಡಿತದಿಂದ ಮೃತಪಟ್ಟಿದ್ದರು. ಇವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲೆಂದು ಬುಧವಾರ ಸಹೋದರ ಗೋವಿಂದ್ ಮಿಶ್ರಾ (22) ಹಾಗೂ ಸಂಬಂಧಿಯಾದ ಚಂದ್ರಶೇಖರ್ ಪಾಂಡೆ ಲೂದಿಯಾನದಿಂದ ಭವಾನಿಪುರಕ್ಕೆ ಬಂದಿದ್ದಾರೆ.
ಆದರೆ, ಅಣ್ಣನ ಅಂತ್ಯಸಂಸ್ಕಾರ ಮುಗಿಸಿದ ನಂತರ ತಮ್ಮ ಗೋವಿಂದ್ ಮಿಶ್ರಾ ಮತ್ತು ಚಂದ್ರಶೇಖರ್ ಪಾಂಡೆ ಮನೆಯಲ್ಲಿ ಮಲಗಿದ್ದರು. ಈ ವೇಳೆ ಇಬ್ಬರಿಗೂ ಹಾವು ಕಚ್ಚಿದೆ. ಇದರಿಂದ ಗೋವಿಂದ್ ಮಿಶ್ರಾ ಸಾವನ್ನಪ್ಪಿದ್ದಾರೆ. ಇತ್ತ, ಪಾಂಡೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಇವರ ಆರೋಗ್ಯ ಸ್ಥಿತಿಯೂ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ತಿಳಿದ ಆರೋಗ್ಯ ಹಾಗೂ ಇತರ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ, ಸ್ಥಳೀಯ ಶಾಸಕ ಕೈಲಾಸ್ನಾಥ್ ಶುಕ್ಲಾ ಕೂಡ ನೊಂದ ಕುಟುಂಬಸ್ಥರನ್ನು ಭೇಟಿ ಮಾಡಿ, ನೆರವು ಕಲ್ಪಿಸುವ ಭರವಸೆ ನೀಡಿದ್ದಾರೆ. ಜೊತೆಗೆ ಗ್ರಾಮದಲ್ಲಿ ಮುಂದೆ ಇಂತಹ ಘಟನೆಗಳು ಮರುಕಳುಹಿಸದಂತೆ ಕ್ರಮ ವಹಿಸಲು ಅಧಿಕಾರಿಗಳು ಶಾಸಕ ಶುಕ್ಲಾ ಸೂಚಿಸಿದ್ದಾರೆ.
ಇದನ್ನೂ ಓದಿ:ಹೊಲದಲ್ಲಿ ಜೀವಂತ ಶಿಶು ಹೂತು ಹೋದ ಹೃದಯಹೀನರು: ರಕ್ಷಿಸಿ ಜೀವ ಉಳಿಸಿದ ರೈತ