ಯೆಲ್ಲಾಂಡು ಕೊತಗುಡೆಂ( ಹೈದರಾಬಾದ್):ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿದ್ದಕ್ಕೆ ಸಹೋದರನೊಬ್ಬ ತನ್ನ ಸಹೋದರಿಯನ್ನು ಕೊಂದು ಹಾಕಿರುವ ಘಟನೆ ತೆಲಂಗಾಣದ ಕೋತಗುಡೆಂ ಜಿಲ್ಲೆಯ ಯೆಲ್ಲಾಂಡು ಮಂಡಲದ ರಾಜೀವ್ ನಗರದಲ್ಲಿ ನಡೆದಿದೆ. ರಾಜೀನ್ ನಗರದ ನಿವಾಸಿ ಸಿಂಧು ಸಂಘವಿ(21) ಮೃತ ದುರ್ದೈವಿ.
ಮೃತ ಸಿಂಧು ಅವರು ಮಹಬೂಬಾಬಾದ್ನ ತೆಲಂಗಾಣ ಆರೋಗ್ಯ ಇಲಾಖೆಯಲ್ಲಿ ಸಹಾಯಕ ನರ್ಸ್ ಅಪ್ರೆಂಟಿಸ್ ಆಗಿ ಕೆಲಸ ಮಾಡುತ್ತಿದ್ದರು. ಸಹೋದರಿ ಸಿಂಧು ಮೊಬೈಲ್ ಬಳಸುತ್ತಿದ್ದ ವೇಳೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಇರುತ್ತಿದ್ದಳು. ಆಗಾಗ್ಗೆ ಯುಟ್ಯೂಬ್ದಲ್ಲಿ ರೀಲ್ ಪೋಸ್ಟ್ ಮಾಡುತ್ತಿದ್ದಳು. ಅದು ಅವಳ ಸಹೋದರ ಹರಿಲಾಲ್ಗೆ ಇಷ್ಟವಿರಲಿಲ್ಲ. ಈ ವಿಷಯದ ಬಗ್ಗೆ ಆಗಾಗ್ಗೆ ಅವಳೊಂದಿಗೆ ಜಗಳ ಆಡುತ್ತಿದ್ದನು ಎಂದು ಪೊಲೀಸ್ ಅಧಿಕಾರಿ ಕರುಣಾಕರ್ ತಿಳಿಸಿದ್ದಾರೆ.
ಸೋಮವಾರ ರಾತ್ರಿಯೂ ಸಿಂಧು ಹಾಗೂ ಸಹೋದರ ಹರಿಲಾಲ್ ನಡುವೆ ಆಕೆಯು ಸೋಷಿಯಲ್ ಮೀಡಿಯಾಗೆ ಪೊಸ್ಟ್ ಮಾಡುವ ಕುರಿತಾಗಿ ಜಗಳ ನಡೆದಿತ್ತು. ಸಹೋದರ ಹಾಗೂ ಸಹೋದರಿ ಸಿಂಧು ನಡುವೆ ವಾದ -ವಿವಾದ ನಡೆದು ಅದು ವಿಕೋಪಕ್ಕೆ ತಿರುಗಿತು. ಆ ಸಿಟ್ಟಿನಲ್ಲಿ ಸೋದರ ಹರಿಲಾಲ್ ಸಹೋದರಿ ಸಿಂಧು ತಲೆಗೆ ಗಾರೆ ಕಲ್ಲಿನಿಂದ ಹೊಡೆದಿದ್ದರಿಂದ ತೀವ್ರ ಗಾಯಗೊಂಡಿದ್ದಳು ಎಂದು ತಿಳಿದು ಬಂದಿದೆ.
ತೀವ್ರ ಗಾಯಗೊಂಡಿದ್ದ ಸಿಂಧು ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ವಾರಂಗಲ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ತೀವ್ರ ಗಾಯಗೊಂಡಿದ್ದ ಸಿಂಧು ಸಾವಿಗೀಡಾಗಿದ್ದಾಳೆ.