ನವದೆಹಲಿ :ಭಾರತ ಮತ್ತು ಚೀನಾ ಗಡಿಯ ಪ್ರದೇಶಗಳಲ್ಲಿ ಸೇನೆಗಳು ಹಿಂದಕ್ಕೆ ಸರಿಯುವ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಶಾಂತಿ ಮತ್ತು ನೆಮ್ಮದಿಯ ಪುನರ್ ಸ್ಥಾಪನೆಯತ್ತ ಕೆಲಸ ಮಾಡಬಹುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಸಚಿವ ಜೈಶಂಕರ್ 75 ನಿಮಿಷಗಳ ಕಾಲ ದೂರವಾಣಿ ಸಂಭಾಷಣೆ ನಡೆಸಿದ್ದು, ಪೂರ್ವ ಲಡಾಖ್ನ ವಾಸ್ತವಿಕ ಗಡಿ ರೇಖೆ (ಎಲ್‌ಎಸಿ) ಯುದ್ಧಕ್ಕೂ ಇರುವ ಪರಿಸ್ಥಿತಿ ಹಾಗೂ ಉಭಯ ರಾಷ್ಟ್ರಗಳ ನಡುವಿನ ಗಡಿ ವಿವಾದದ ಕುರಿತು ಚರ್ಚಿಸಿದ್ದಾರೆ.
ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಹಲವಾರು ಸುತ್ತಿನ ನಿರಂತರ ಮಾತುಕತೆಗಳು ತೀವ್ರ ಪರಿಣಾಮ ಬೀರಿವೆ. ಇದೀಗ ಪ್ಯಾಂಗಾಂಗ್ ಸರೋವರದಿಂದ ಸೇನೆಗಳು ಯಶಸ್ವಿಯಾಗಿ ವಾಪಸ್ ಆಗಿವೆ. ಪೂರ್ವ ಲಡಾಖ್ನ ಎಲ್‌ಎಸಿಯ ಉದ್ದಕ್ಕೂ ಇರುವ ಉಳಿದ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು. ಇದಕ್ಕೆ ಸಮಯ ಬೇಕಾಗುತ್ತದೆ.
ಆದರೆ, ಶಾಂತಿ ಭಂಗ, ಹಿಂಸಾಚಾರಗಳು ನಮ್ಮ ಸಂಬಂಧದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತವೆ. ಇನ್ನೂ ಕೆಲ ಪ್ರದೇಶಗಳಿಂದ ಸೇನೆಗಳು ಹಿಂದಕ್ಕೆ ಸರಿಯುವ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ನಾವು ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯ ಮರುಸ್ಥಾಪನೆಯತ್ತ ಚಿತ್ತ ಹರಿಸಬಹುದು ಎಂದು ವಾಂಗ್ ಯಿಗೆ ಜೈಶಂಕರ್ ಹೇಳಿದ್ದಾರೆ.
ಫೆ.20ರಂದು ನಡೆದ ಭಾರತ ಮತ್ತು ಚೀನಾ ನಡುವಿನ 10 ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ವೇಳೆ ಪ್ಯಾಂಗಾಂಗ್ ಸರೋವರದ ಬಳಿಕ ಪೂರ್ವ ಲಡಾಖ್ನಲ್ಲಿನ ಇತರ ಮೂರು ಪ್ರದೇಶಗಳಾದ ಗೋಗ್ರಾ ಹೈಟ್ಸ್, ಹಾಟ್ ಸ್ಪ್ರಿಂಗ್ಸ್ ಮತ್ತು ಡೆಪ್ಸಾಂಗ್ನಿಂದಲೂ ಎರಡು ದೇಶಗಳು ತಮ್ಮ ಸೇನೆಗಳನ್ನು ವಾಪಾಸ್ ಕರೆಯಿಸಿಕೊಳ್ಳುವ ಕುರಿತು ಚರ್ಚಿಸಿದ್ದವು.