ನವದೆಹಲಿ :ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಅವರು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ, ಭಾರತದಲ್ಲಿ ಬಿಬಿಸಿ ಮಾಧ್ಯಮ ಕಚೇರಿಗಳ ಮೇಲೆ ತೆರಿಗೆ ಅಧಿಕಾರಿಗಳು ಸಮೀಕ್ಷೆ ನಡೆಸಿರುವ ಬಗ್ಗೆ ಪ್ರಸ್ತಾಪಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಜೈಶಂಕರ್ ಅವರು ಭಾರತದಲ್ಲಿ ಕಾರ್ಯ ನಿರ್ವಹಿಸುವ ಯಾವುದೇ ಸಂಸ್ಥೆಗಳು ದೇಶದ ಕಾನೂನಿಗೆ ಬದ್ಧವಾಗಿರಬೇಕು ಎಂದು ದೃಢವಾಗಿ ಹೇಳಿದ್ದಾರೆ.
ಭಾರತದಲ್ಲಿ ನಡೆಯಲಿರುವ ಜಿ20 ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಬ್ರಿಟನ್ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಂಸ್ಥೆಗಳು ದೇಶದ ಕಾನೂನಿಗೆ ಬದ್ಧವಾಗಿರಬೇಕು. ಅಲ್ಲದೇ ದೇಶದ ಕಾನೂನುಗಳನ್ನು ಮತ್ತು ನಿಬಂಧನೆಗಳನ್ನು ಸಂಪೂರ್ಣವಾಗಿ ಅನುಸರಿಸಬೇಕು ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಯುವ ವೃತ್ತಿಪರ ಯೋಜನೆ ಪ್ರಾರಂಭಿಸುವ ಕುರಿತು ಚರ್ಚೆ ನಡೆಸಿದ್ದಾರೆ. ಭಾರತದ ಜಿ20 ಅಧ್ಯಕ್ಷತೆಯ ಕಾರ್ಯಸೂಚಿ ಮತ್ತು ಜಾಗತಿಕ ಪರಿಸ್ಥಿತಿಗಳ ಕುರಿತು ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವ ಜೈಶಂಕರ್ ,'ಯುಕೆಯ ವಿದೇಶಾಂಗ ಕಾರ್ಯದರ್ಶಿ @JamesCleverly ಅವರೊಂದಿಗಿನ ದ್ವಿಪಕ್ಷೀಯ ಸಭೆಯೊಂದಿಗೆ ಇಂದಿನ ದಿನ ಪ್ರಾರಂಭವಾಯಿತು. ಉಭಯ ದೇಶಗಳ ಪ್ರಗತಿ ಸಂಬಂಧ ಚರ್ಚೆ ನಡೆಸಿದ್ದೇವೆ. ಪ್ರಮುಖವಾಗಿ ಯುವ ವೃತ್ತಿಪರ ಯೋಜನೆ ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಅಲ್ಲದೇ ಜಾಗತಿಕ ಪರಿಸ್ಥಿತಿ, ಜಿ20 ಅಜೆಂಡಾ ಬಗ್ಗೆ ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.