ನವದೆಹಲಿ:ಭಾರತ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ದೇಶ, ವಿದೇಶಗಳಲ್ಲಿ ಹಲವು ಸಂದರ್ಭಗಳಲ್ಲಿ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೆಹಲಿ ಪೊಲೀಸರು ಕೋರ್ಟ್‌ಗೆ ಸಲ್ಲಿಸಿರುವ 1,599 ಪುಟಗಳ ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ.
ಸಂತ್ರಸ್ತೆ 01 : ಮೊದಲ ಸಂತ್ರಸ್ತೆ ತನ್ನ ಹೇಳಿಕೆಯಲ್ಲಿ, ಸಿಂಗ್ ಅವರು ತನಗೆ ಏಳು ಪ್ರತ್ಯೇಕ ಸಂದರ್ಭಗಳಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದಾರೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಸೆಕ್ಷನ್ 164ರ ಅಡಿಯಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ಆಧರಿಸಿ, ಇಬ್ಬರು ಸಾಕ್ಷಿಗಳು ಕೃತ್ಯವನ್ನು ತಾವು ನೋಡಿರುವುದಾಗಿ ಹೇಳಿರುವುದು ಚಾರ್ಜ್ಶೀಟ್ನಲ್ಲಿದೆ. ಹೀಗಾಗಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354ರ ಅಡಿಯಲ್ಲಿ ಸಿಂಗ್ ಅಪರಾಧ ಎಸಗಿದ್ದಾರೆ ಎಂದು ತಿಳಿಸಲಾಗಿದೆ.
ಸಂತ್ರಸ್ತೆ 02 : ಲಕ್ನೋದ ಎಸ್‌ಎಐ ಸೆಂಟರ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಗ್ರೂಪ್ ಫೋಟೋ ವೇಳೆ ಸಿಂಗ್ ತನ್ನನ್ನು ಅಸಭ್ಯ ರೀತಿಯಲ್ಲಿ ಸ್ಪರ್ಶಿಸಿದ್ದಾರೆ ಎಂದು ಇವರು ಆರೋಪಿಸಿದ್ದಾರೆ. ಇವರ ಪರ ಸಾಕ್ಷಿದಾರರ ಹೇಳಿಕೆಯ ಆಧಾರದಡಿ ಆರೋಪಪಟ್ಟಿಯಲ್ಲಿ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಇದನ್ನು ಅಪರಾಧವೆಂದು ಘೋಷಿಸಲಾಗಿದೆ.
ಸಂತ್ರಸ್ತೆ 03 : ಬಲ್ಗೇರಿಯಾದ ಸೋಫಿಯಾದಲ್ಲಿ ಅನುಚಿತ ಲೈಂಗಿಕ ಸಂಪರ್ಕದ ಘಟನೆಗೆ ಸಂಬಂಧಿಸಿದಂತೆ ಮೂರನೇ ಸಂತ್ರಸ್ತೆ ಮಾಡಿದ ಆರೋಪಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಹೇಳಿಕೆ ಮತ್ತು ಸಾಕ್ಷ್ಯಗಳು (ಛಾಯಚಿತ್ರಗಳು) ಪ್ರಕರಣವನ್ನು ಮತ್ತಷ್ಟು ಬಲಪಡಿಸುತ್ತವೆ. ಐಪಿಸಿಯ ಸೆಕ್ಷನ್ 354 ರ ಅಡಿಯಲ್ಲಿ ಅಪರಾಧವನ್ನು ಆರೋಪಪಟ್ಟಿಯಲ್ಲಿ ಸೇರಿಸಲಾಗಿದೆ.