ಮೊರ್ಬಿ(ಗುಜರಾತ್):ಗುಜರಾತ್ನ ಮೊರ್ಬಿಯ ನವೀಕರಣಗೊಂಡ ಶತಮಾನಗಳಷ್ಟು ಹಳೆಯದಾದ ಸೇತುವೆ ಕುಸಿದು ಬಿದ್ದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 100 ಕ್ಕೆ ಏರಿಕೆ ಕಂಡಿದೆ. 177 ಜನರನ್ನು ರಕ್ಷಿಸಲಾಗಿದೆ. 19 ಮಂದಿ ಗಾಯಗೊಂಡಿದ್ದು ಚಿಕಿತ್ಸೆಗೆ ದಾಖಲಿಸಲಾಗಿದೆ. ಸೇನೆ, ನೌಕಾಪಡೆ, ವಾಯುಪಡೆ, ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಮೋದಿ ರೋಡ್ ಶೋ ರದ್ದು:ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂ ಪರಿಹಾರ ನೀಡಿದ್ದಾರೆ.
ಇದೇ ವೇಳೆ, ಅಹಮದಾಬಾದ್‌ನಲ್ಲಿ ಇಂದು ಮೋದಿ ಅವರ ರೋಡ್ ಶೋ ನಿಗದಿಯಾಗಿಯಾಗಿತ್ತು. ಆದರೆ ಸೇತುವೆ ದುರಂತ ಸಂಭವಿಸಿದ್ದರಿಂದ ಮೋದಿ ಈ ಕಾರ್ಯಕ್ರಮ ರದ್ದಾಗಿದೆ. ಇನ್ನು ಘಟನಾ ಸ್ಥಳಕ್ಕೆ ಪ್ರಧಾನಿ ಮೋದಿ ಆಗಮಿಸಿ ದುರಂತದ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೇಂದ್ರದಿಂದ 2, ರಾಜ್ಯ ಸರ್ಕಾರದಿಂದ 4 ಲಕ್ಷ ರೂ ಪರಿಹಾರ ಘೋಷಣೆ:ಪ್ರಧಾನಿ ತಲಾ 2 ಲಕ್ಷ ರೂ ಪರಿಹಾರ ಘೋಷಣೆ ಮಾಡಿದರೆ,ರಾಜ್ಯ ಸರ್ಕಾರವು ಮೃತರ ಕುಟುಂಬಗಳಿಗೆ ತಲಾ ₹4 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ ತಲಾ ₹50 ಸಾವಿರ ನೆರವು ಪ್ರಕಟಿಸಿದೆ.
ಮೋರ್ಬಿಯಲ್ಲಿ ಎನ್‌ಡಿಆರ್‌ಎಫ್:‘ಗಾಂಧಿನಗರ ಹಾಗೂ ವಡೋದರದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಮೂರು ತಂಡಗಳನ್ನು ರಕ್ಷಣಾ ಕಾರ್ಯಕ್ಕಾಗಿ ಮೊರ್ಬಿಗೆ ಕಳುಹಿಸಲಾಗಿದೆ. ಮತ್ತೊಂದು ತಂಡವು ರಾಜ್‌ಕೋಟ್ ಮಾರ್ಗವಾಗಿ ಘಟನಾ ಸ್ಥಳಕ್ಕೆ ತೆರಳಲಿದೆ’ ಎಂದು ಎನ್‌ಡಿಆರ್‌ಎಫ್‌ನ ಮಹಾ ನಿರ್ದೇಶಕ (ಡಿಜಿ) ಅತುಲ್ ಕರ್ವಾಲ್ ಹೇಳಿದ್ದಾರೆ.
ಸ್ಥಳದಲ್ಲೇ ಬೀಡುಬಿಟ್ಟ ಗುಜರಾತ್ ಗೃಹ ಸಚಿವ:ಸ್ಥಳದಲ್ಲಿ ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಕೂಡ ಹಾಜರಿದ್ದು ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ ನಡೆಸುತ್ತಿದ್ದಾರೆ. ನೂರಾರು ಜನರು ಸೇತುವೆ ಮೇಲೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇಲ್ಲಿಯವರೆಗೂ 30 ಮಕ್ಕಳ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಇನ್ನೊಂದು ಮೂಲಗಳ ಪ್ರಕಾರ ಅಕ್ಟೋಬರ್ 30ರಂದು ಸಂಜೆ ಛಾತ್ ಪೂಜೆಯ ನಿಮಿತ್ತ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ಸೇತುವೆ ಮೇಲೆ ಬಹಳಷ್ಟು ಜನರು ಜಮಾಯಿಸಿದ್ದರು. ಕುಸಿದಾಗ ಸೇತುವೆ ಮೇಲೆ ಸುಮಾರು 500 ಜನರು ಇದ್ದರು ಎನ್ನಲಾಗಿದ್ದು, ಭಾರ ಹೆಚ್ಚಾಗಿದ್ದಕ್ಕೆ ಸೇತುವೆ ಕುಸಿದಿದೆ ಎಂದು ತಿಳಿದುಬಂದಿದೆ.
ನವೀಕರಣದ ಸೇತುವೆ ಗುಣಮಟ್ಟದ ಪರಿಶೀಲನೆ ಮಾಡಿರಲಿಲ್ಲ:ಇನ್ನು ಸೇತುವೆ ನವೀಕರಣದ ಬಳಿಕ ಅದರ ಗುಣಮಟ್ಟವನ್ನು ಪರಿಶೀಲನೆ ಮಾಡಿಲ್ಲ ಎನ್ನಲಾಗಿದೆ. ಮಾಹಿತಿಯ ಪ್ರಕಾರ ದುರಂತ ಸಂಭವಿಸಿದ ತೂಗು ಸೇತುವೆ ಮೇಲೆ ಅಬ್ಬಬ್ಬಾ ಅಂದ್ರೆ 150 ಜನರು ಒಟ್ಟಿಗೆ ಓಡಾಡಬಹುದು ಅಥವಾ ನಿಲ್ಲಬಹುದು. ಆದ್ರೆ, ಪೂಜೆ ಎಂದು ಸಾಮರ್ಥ್ಯಕ್ಕಿಂತ ಮೂರು ಪಟ್ಟು ಅಂದ್ರೆ ಸುಮಾರು 500 ಜನರು ಸೇತುವೆ ಮೇಲೆ ನಿಂತಿದ್ದಕ್ಕೆ ಸೇತುವೆ ಕುಸಿದುಬೀಳಲು ಪ್ರಮುಖ ಕಾರಣ ಎನ್ನಲಾಗಿದೆ.
ಇದನ್ನು ಓದಿ:ತೂಗು ಸೇತುವೆ ಕುಸಿದು 60ಕ್ಕೂ ಹೆಚ್ಚು ಜನ ಸಾವು: ರಾಷ್ಟ್ರಪತಿ ಮುರ್ಮು, ಮೋದಿ, ಶಾ ಸಂತಾಪ