ಪೂರ್ವ ಗೋದಾವರಿ(ಆಂಧ್ರ ಪ್ರದೇಶ): ಅದ್ಧೂರಿ ಮದುವೆ, ಇನ್ನೇನು ಹೊಸ ಜೀವನ ಆರಂಭ ಎಂಬ ಖುಷಿಯಲ್ಲಿದ್ದ ಕುಟುಂಬಸ್ಥರಿಗೆ ವಾರ ಕಳೆಯುವಷ್ಟರಲ್ಲಿ ಆಘಾತ ಉಂಟಾಗಿದೆ. ಇಲ್ಲಿನ ಪೂರ್ವ ಗೋದಾವರಿ ಜಿಲ್ಲೆಯ ಸಾಮರ್ಲಕೋಟ ವಲಯದ ಮೇದಪಾಡು ನಿವಾಸಿ ಅಶ್ವಿನಿ ಸ್ವಾತಿ ಎಂಬ ನವವಿವಾಹಿತೆ ನೇಣಿಗೆ ಶರಣಾಗಿದ್ದಾರೆ.
ಹೌದು, ಕಳೆದ ಜೂನ್ 29 ರಂದು ವಿವಾಹವಾಗಿದ್ದ ಈಕೆ, ಸಾವಿಗೆ ಶರಣಾಗಲು ಕಾರಣ ಏನು ಎಂದು ತಿಳಿದುಬಂದಿಲ್ಲ. ಅಶ್ವಿನಿಯ ಸೋದರಮಾವನಾದ ಕೊರುಕೊಂಡ ಪ್ರದೇಶದ ಗಾದರಾಡದ ಕನುಮುರೆಡ್ಡಿ ಅಶೋಕ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು.
ಇನ್ನೇನು ಆಷಾಢ ಮಾಸ ಸಮೀಪಿಸುತ್ತಿದ್ದು ಅಶ್ವಿನಿಯನ್ನು ತವರು ಮನೆಗೆ ಕಳುಹಿಸಲು ಗಂಡನ ಮನೆಯಲ್ಲಿ ಸಿದ್ಧತೆ ನಡೆಸುತ್ತಿದ್ದರು. ಆದರೆ ಆಕೆ ಸೋಮವಾರದಂದು ಮನೆಯಲ್ಲಿ ಎಲ್ಲರೂ ಇದ್ದ ಸಂದರ್ಭದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಅಶ್ವಿನಿ ಸಾವಿನಿಂದ ಪತಿ ಅಶೋಕ್ ಕಂಗಾಲಾಗಿದ್ದಾರೆ. ಘಟನೆ ನಡೆದ ಬಳಿಕ ಈ ವಿಷಯವನ್ನು ಪೊಲೀಸರಿಗೆ ತಿಳಿಸದೆ ಎರಡೂ ಕುಟುಂಬಗಳು ರಾಜಿ ಮಾಡಿಕೊಂಡು ಶವ ಸಂಸ್ಕಾರ ನಡೆಸಲು ಮುಂದಾಗಿದ್ದರು. ಆದರೆ ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹದ ಪಂಚನಾಮೆ ನಡೆಸಿದ್ದಾರೆ.
ಸದ್ಯ ಅಶ್ವಿನಿ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.