ಕನೌಜ್(ಉತ್ತರ ಪ್ರದೇಶ):ಕೆಲವೇ ಕ್ಷಣಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಾಗಿದ್ದ ವಧುವಿನ ಬಾಳಿನಲ್ಲಿ ಯುವಕನೊಬ್ಬ ಆಟವಾಡಿದ್ದು, ಇದರಿಂದ ಆಕ್ರೋಶಗೊಂಡಿರುವ ಯುವತಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಉತ್ತರ ಪ್ರದೇಶದ ಕನೌಜ್ನ ಕೊಟ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇದರಿಂದ ಮದುವೆ ಮುರಿದು ಬಿದ್ದಿದೆ. ವಧುವಿಗೆ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವರ ದೇವೇಂದ್ರ ವೇದಿಕೆಯಿಂದ ಪರಾರಿಯಾಗಿದ್ದಾರೆ. ಹೀಗಾಗಿ ವಧುವಿನ ತಂದೆ ಕಣ್ಣೀರಿನಲ್ಲೇ ವರನ ಕುಟುಂಬಸ್ಥರ ಮುಂದೆ ಮನವಿ ಮಾಡಿಕೊಂಡಿದ್ದಾರೆ. ಆದರೂ ಅವರ ಮನಸು ಕರಗಿಲ್ಲ.
ಏನಿದು ಪ್ರಕರಣ?
ಕೊಟ್ವಾಲಿ ಪ್ರದೇಶದ ಮೈನ್ಪುರಿಯ ವಧು ಹಾಗೂ ಫಿರೋಜಾಬಾದ್ನ ವರನಿಗೂ ಮದುವೆ ಫಿಕ್ಸ್ ಆಗಿತ್ತು. ಅದರಂತೆ ಜೂನ್ 16ರಂದು ಮದುವೆ ಕಾರ್ಯಕ್ರಮ ಜೋರಾಗಿ ನಡೆದಿದ್ದವು. ತಾಳಿ ಕಟ್ಟಲು ಕೆಲ ನಿಮಿಷಗಳು ಬಾಕಿ ಇರುವಾಗಲೇ ವೇದಿಕೆ ಮೇಲೆ ವಧು ದೇವೇಂದ್ರ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ವೇಳೆ, ಆತ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದು, ವಧುವಿಗೆ ದೆವ್ವದ ಕಾಟವಿದೆ ಎಂದು ಆರೋಪ ಮಾಡಿದ್ದಾನೆ. ವರನ ಕಡೆಯವರು ಇದೇ ರೀತಿಯ ಆರೋಪ ಮಾಡಿದ್ದು, ಅನಾರೋಗ್ಯ ಪೀಡಿತ ಹುಡುಗಿಯನ್ನ ನಮ್ಮ ಯುವಕನೊಂದಿಗೆ ಮದುವೆ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
ಅದ್ಧೂರಿ ಮದುವೆ ಸಮಾರಂಭ ಅರ್ಧಕ್ಕೆ ಮೊಟಕು 50 ಸಾವಿರ ರೂ. ವರದಕ್ಷಿಣೆಗೆ ಒತ್ತಾಯ
ಆದ್ರೆ ವರ ದೇವೇಂದ್ರ ಮದುವೆ ಮಾಡಿಕೊಳ್ಳಲು 50 ಸಾವಿರ ರೂ. ವರದಕ್ಷಿಣೆಗೆ ಒತ್ತಾಯಿಸಿದ್ದರು. ಈ ಹಣ ನೀಡಲು ವಧುವಿನ ಕಡೆಯವರು ವಿಫಲಗೊಂಡಿದ್ದರಿಂದ ಈ ರೀತಿಯಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಮದುವೆ ಸಂದರ್ಭದಲ್ಲೇ ಈ ಬೇಡಿಕೆ ಇಟ್ಟಿರುವ ಕಾರಣ ನಮ್ಮ ಕೈಯಿಂದ ಅದನ್ನ ಸೇರಿಸಲು ಸಾಧ್ಯವಾಗಿಲ್ಲ. ಅದೇ ಕಾರಣಕ್ಕಾಗಿ ಆತ ವೇದಿಕೆಯಿಂದ ಪರಾರಿಯಾಗಿದ್ದಾನೆಂದು ಅವರು ಹೇಳಿಕೊಂಡಿದ್ದಾರೆ. ಘಟನೆ ಬಗ್ಗೆ ವಧುವಿನ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.