ಕರ್ನಾಟಕ

karnataka

ETV Bharat / bharat

ವಧುವಿನ ಸಹೋದರ, ವರನ ಸಂಬಂಧಿಯಾದ ಯೋಧರು: ನಕ್ಸಲ್ ಪೀಡಿತ ಜಿಲ್ಲೆಯಲ್ಲಿ ಸಿಆರ್​ಪಿಎಫ್​ ಶ್ಲಾಘನೀಯ ಕಾರ್ಯ

ಮಾವೋವಾದಿಗಳ ಉಪಟಳದಿಂದ ಪೀಡಿತವಾಗಿರುವ ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ನಿಧಾನವಾಗಿಯಾದರೂ ಬದಲಾವಣೆಯ ಗಾಳಿ ಬೀಸುತ್ತಿದೆ. ಸದ್ಯ ಇಲ್ಲಿ ಭದ್ರತೆಗೆ ನಿಯೋಜಿತರಾಗಿರುವ ವಿವಿಧ ಭದ್ರತಾ ಪಡೆಗಳ ಯೋಧರು ಮತ್ತು ಅಧಿಕಾರಿಗಳು ಸ್ಥಳೀಯರ ವಿಶ್ವಾಸ ಗಳಿಸಿದ್ದು, ಅವರಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.

ಮಾವೋವಾದಿ ಪೀಡಿತ ಸುಕ್ಮಾ ಪ್ರದೇಶದಲ್ಲಿ ಸಿಆರ್‌ಪಿಎಫ್‌ನಿಂದ ಸಾಮೂಹಿಕ ವಿವಾಹ
CRPF organises mass marriage in Maoist infested Sukma region 12 couples tie knot

By

Published : Jan 9, 2023, 1:08 PM IST

ಸುಕ್ಮಾ (ಛತ್ತೀಸ್‌ಗಢ): ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಸಿಆರ್​ಪಿಎಫ್​ ಜವಾನರು ಇಲ್ಲಿನ ಜನರಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ್ದು, ಇದು ಇಡೀ ದೇಶದ ಗಮನ ಸೆಳೆಯುತ್ತಿದೆ. ಮಾವೋವಾದಿಗಳ ಹಿಂಸಾಚಾರದಿಂದ ಪೀಡಿತವಾಗಿದ್ದ ಜಿಲ್ಲೆ ಸುಕ್ಮಾದಲ್ಲಿ ಈಗ ಕಾಲಕ್ಕೆ ತಕ್ಕಂತೆ ಜೀವನ ಬದಲಾಗುತ್ತಿದೆ ಅನಿಸುತ್ತಿದೆ. ಸಮವಸ್ತ್ರದಲ್ಲಿರುವ ಸಿಆರ್‌ಪಿಎಫ್ ಜವಾನರೆಂದರೆ ಭಯಪಡುತ್ತಿದ್ದ ಗ್ರಾಮಸ್ಥರು ಈಗ ಅವರನ್ನು ತಮ್ಮ ರಕ್ಷಕರಂತೆ ಕಾಣಲಾರಂಭಿಸಿದ್ದಾರೆ. ಈಗ ಇಲ್ಲಿನ ಜನ ತಮ್ಮ ವೈವಾಹಿಕ ಜೀವನವನ್ನು ಕೂಡ ಇಲ್ಲಿ ನಿಯೋಜಿಸಲಾದ ಸಿಆರ್‌ಪಿಎಫ್ ಜವಾನರು ಮತ್ತು ಅಧಿಕಾರಿಗಳ ಆಶೀರ್ವಾದದೊಂದಿಗೆ ಪ್ರಾರಂಭಿಸುತ್ತಿರುವುದು ವಿಶೇಷವಾಗಿದೆ.

ಭಾನುವಾರ ಸುಕ್ಮಾ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 12 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಜೋಡಿಗಳಿಗೆ ಸಿಆರ್‌ಪಿಎಫ್ ಮತ್ತು ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಅಧಿಕಾರಿಗಳು ಉಡುಗೊರೆಗಳನ್ನು ಕೂಡ ನೀಡಿದರು. ಮದುವೆಯ ಸಂದರ್ಭದಲ್ಲಿ ಕೆಲ ಜವಾನರು ವಧುವಿನ ಸಹೋದರರಾದರು, ಇನ್ನು ಕೆಲವರು ವರನ ಸಂಬಂಧಿಯಾದರು. ಸುಕ್ಮಾ ಮಿನಿ ಕ್ರೀಡಾಂಗಣದಲ್ಲಿ ವಿವಾಹ ಸಮಾರಂಭವನ್ನು ಆಯೋಜಿಸಲಾಗಿತ್ತು.

ಸಿಆರ್‌ಪಿಎಫ್‌ನ 74 ಕಾರ್ಪ್ಸ್‌ನ ಕಮಾಂಡೆಂಟ್ ಡಿಎನ್ ಯಾದವ್ ಅವರು ನವವಿವಾಹಿತರನ್ನು ಅಭಿನಂದಿಸಿದರು. ಪ್ರತಿಯೊಂದು ಜೋಡಿಗೆ ಆಶೀರ್ವಾದದ ರೂಪದಲ್ಲಿ 1100 ರೂ.ಗಳ ಟೋಕನ್ ಹಣ ಮತ್ತು ದಂಪತಿಗಳಿಗೆ 12 ಜೋಡಿ ಸೀರೆಗಳನ್ನು ಉಡುಗೊರೆಯಾಗಿ ನೀಡಲಾಯಿತು. ಎರಡನೇ ಬೆಟಾಲಿಯನ್ ವತಿಯಿಂದ ಆಯೋಜಿಸಿರುವ ಸಾಮೂಹಿಕ ವಿವಾಹ ಉತ್ತಮ ಕಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ಹಾರಿಸ್ ಎಸ್. ಶ್ಲಾಘಿಸಿದರು. ಮುಂದೆಯೂ ಇಂಥ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸುತ್ತೇವೆ. ಇಂಥ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಗರ್ಭಿಣಿಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಿದ್ದ ಭದ್ರತಾ ಪಡೆ ಯೋಧರು: ಭದ್ರತಾ ಪಡೆಗಳು ಸುಕ್ಮಾ ಜಿಲ್ಲೆಯ ಜನರಿಗಾಗಿ ಆಗಾಗ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಲೇ ಇವೆ. ನಕ್ಸಲ್ ಪೀಡಿತ ಗ್ರಾಮವೊಂದರ ಭದ್ರತಾ ಪಡೆ ಶಿಬಿರದಲ್ಲಿ ನಿಯೋಜಿತವಾಗಿರುವ ರೆಸಲ್ಯೂಟ್ ಆಕ್ಷನ್, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಕೋಬ್ರಾ ಸಿಆರ್‌ಪಿಎಫ್) ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಕಮಾಂಡೋ ಬೆಟಾಲಿಯನ್‌ನ ಪಡೆಯ ಯೋಧರು ಗರ್ಭಿಣಿ ಮಹಿಳೆಯೊಬ್ಬರನ್ನು ಹೆರಿಗೆಗಾಗಿ ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಿ ಜನಮನ್ನಣೆಗೆ ಪಾತ್ರರಾಗಿದ್ದರು. ಈ ಘಟನೆ ಕಳೆದ ಡಿಸೆಂಬರ್ ಕೊನೆಯಲ್ಲಿ ನಡೆದಿತ್ತು.

ಸುಕ್ಮಾ ಜಿಲ್ಲೆಯ ನಕ್ಸಲ್ ಪೀಡಿತ ಗ್ರಾಮ ಪೊಟ್ಕಪಲ್ಲಿಯಲ್ಲಿನ ಭದ್ರತಾ ಪಡೆ ಶಿಬಿರದಲ್ಲಿ ಕೋಬ್ರಾ ಸಿಆರ್‌ಪಿಎಫ್ ಮತ್ತು ಎಸ್‌ಟಿಎಫ್ ಪಡೆಗಳನ್ನು ನಿಯೋಜಿಸಲಾಗಿದೆ. ಗ್ರಾಮದ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ತಕ್ಷಣ ಕಾರ್ಯಪ್ರವೃತ್ತರಾದ ಈ ಯೋಧರು ಮಹಿಳೆಗೆ ತಕ್ಷಣ ಸಹಾಯ ಮಾಡಿ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಗರ್ಭಿಣಿ ವೆಟ್ಟಿ ಮಾಯಾ ಹೆಸರಿನ ಮಹಿಳೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಸೂಕ್ತ ಸಮಯದಲ್ಲಿ ಸಹಾಯ ಮಾಡಿದ್ದಕ್ಕಾಗಿ ವೆಟ್ಟಿ ಮಾಯಾ ಕುಟುಂಬ ಸೇರಿದಂತೆ ಸಂಪೂರ್ಣ ಪೋಟಕಪಲ್ಲಿ ಗ್ರಾಮಸ್ಥರು ಮತ್ತು ಭದ್ರಾಚಲಂ ಆಸ್ಪತ್ರೆಯ ವೈದ್ಯರು 208 ಕೋಬ್ರಾ, ಎಸ್‌ಟಿಎಫ್ ಮತ್ತು ಸಿಆರ್‌ಪಿಎಫ್ ಯೋಧರನ್ನು ಶ್ಲಾಘಿಸಿದರು.

ಇದನ್ನೂ ಓದಿ: ಛತ್ತೀಸ್‌ಗಡದಲ್ಲಿ ನಕ್ಸಲರ ಅಟ್ಟಹಾಸ​: ಗುಂಡಿನ ಕಾಳಗದಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮ

ABOUT THE AUTHOR

...view details