ಮುಂಬೈ (ಮಹಾರಾಷ್ಟ್ರ):ಸಿಬಿಐನ ಸುಲಿಗೆ ಮತ್ತು ಲಂಚದ ಪ್ರಕರಣದಲ್ಲಿ ಮಾಜಿ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರಿಗೆ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು ಬಾಂಬೆ ಹೈಕೋರ್ಟ್ ಜೂನ್ 23ರ ವರೆಗೆ ವಿಸ್ತರಿಸಿ ಆದೇಶಿಸಿದೆ. ಹೈ ಪ್ರೊಫೈಲ್ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಿಡುಗಡೆ ಮಾಡುವ ಬದಲಾಗಿ, ನಟ ಶಾರುಖ್ ಖಾನ್ ಅವರ ಬಳಿ ಸಮೀರ್ ವಾಂಖೆಡೆ ಹಾಗೂ ಇತರ ನಾಲ್ವರು ಆರೋಪಿಗಳು 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.
ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಎಸ್ ಜಿ ಡಿಗೆ ಅವರಿದ್ದ ವಿಭಾಗೀಯ ಪೀಠ ಈ ಪ್ರಕರಣ ವಿಚಾರಣೆ ನಡೆಸಿದ್ದು, ಈ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐ) ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ವಾಂಖೆಡೆ ಸಲ್ಲಿಸಿರುವ ಮನವಿಯನ್ನು ಜೂನ್ 23ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ. ಈ ಹಿಂದೆ ನ್ಯಾಯಾಲಯವು ನಿರ್ದೇಶಿಸಿದಂತೆ ಅವರ ಕಕ್ಷಿದಾರ ಮತ್ತು ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿಯು ವಿಚಾರಣೆಗಾಗಿ ಸಿಬಿಐ ಮುಂದೆ ಹಾಜರಾಗುತ್ತಿದ್ದಾರೆ ಎಂದು ವಾಂಖೆಡೆ ಅವರ ವಕೀಲ ಅಬದ್ ಪೋಂಡಾ ವಿಭಾಗೀಯ ಪೀಠಕ್ಕೆ ತಿಳಿಸಿದರು. ಇದುವರೆಗೆ ವಾಂಖೆಡೆ ಸಿಬಿಐ ಮುಂದೆ ಏಳು ಬಾರಿ ವಿಚಾರಣೆಗೆ ಹಾಜರಾಗಿದ್ದು, ಸಹಕಾರ ನೀಡುತ್ತಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.
ಸಿಬಿಐ ಪರ ವಕೀಲ ಕುಲದೀಪ್ ಪಾಟೀಲ್ ವಾದ ಮಂಡಿಸಿ, ಪ್ರಕರಣದ ತನಿಖೆ ನಿರ್ಣಾಯಕ ಹಂತದಲ್ಲಿದೆ ಮತ್ತು ವಿಚಾರಣೆಯನ್ನು ರದ್ದುಗೊಳಿಸುವಂತೆ ಐಆರ್‌ಎಸ್ ಅಧಿಕಾರಿಯ ಅರ್ಜಿಯನ್ನು ನಿರ್ವಹಿಸಲಾಗುವುದಿಲ್ಲ. ಎರಡೂ ಕಡೆಯ ವಾದವನ್ನು ಆಲಿಸಿದ ಪೀಠವು ಜೂನ್ 23 ರಂದು ಹೆಚ್ಚಿನ ವಿಚಾರಣೆಗೆ ಅರ್ಜಿಯನ್ನು ಮುಂದೂಡಿತು ಮತ್ತು ಮಧ್ಯಂತರ ಪರಿಹಾರವನ್ನು ವಿಸ್ತರಿಸಿ ಆದೇಶ ನೀಡಿದೆ.