ನವದೆಹಲಿ: ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆದಾರನನ್ನು ಬಂಧಿಸಿದ್ದಾರೆ. ಈ ಮೂಲಕ ಕೊಕೇನ್ ಕಳ್ಳಸಾಗಣೆಯ ಪ್ರಮುಖ ಪ್ರಕರಣವನ್ನು ಅವರು ಭೇದಿಸಿದ್ದಾರೆ. ಬ್ರೆಜಿಲ್ ಪ್ರಜೆ ತನ್ನ ಹೊಟ್ಟೆಯಲ್ಲಿ ಕೊಕೇನ್ ತುಂಬಿದ 82 ಕ್ಯಾಪ್ಸುಲ್ ಗಳನ್ನು ತಂದಿದ್ದ. ಆರೋಪಿ ಬ್ರೆಜಿಲ್ ನಿಂದ ದುಬೈ ತಲುಪಿ ಅಲ್ಲಿಂದ ನವದೆಹಲಿಗೆ ಬರುತ್ತಿದ್ದಂತೆ ಆತನಿಗೆ ಕಸ್ಟಮ್ಸ್ ಅಧಿಕಾರಿಗಳು ಬಲೆ ಹಾಕಿದ್ದಾರೆ.
ಆರೋಪಿಗೆ ವೈದ್ಯಕೀಯ ಮೇಲ್ವಿಚಾರಣೆ..ಕಸ್ಟಮ್ಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಬ್ರೆಜಿಲ್ ರಾಜಧಾನಿ ಸಾವೊ ಪಾಲೊದಿಂದ ದುಬೈ ಮೂಲಕ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದ ಈ ಪ್ರಜೆಯು ಮಾದಕ ದ್ರವ್ಯ ನುಂಗುತ್ತಿದ್ದ ಶಂಕೆಯ ಮೇಲೆ ಕಸ್ಟಮ್ಸ್ ಗುಪ್ತಚರ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ. ಆರೋಪಿಯಿಂದ ಬಿಳಿ ಬಣ್ಣದ ಪೌಡರ್ ಒಳಗೊಂಡ 82 ಕ್ಕೂ ಹೆಚ್ಚು ಕ್ಯಾಪ್ಸುಲ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಕ್ಯಾಪ್ಸುಲ್ನಲ್ಲಿ ಕೊಕೇನ್ ತುಂಬಿರುವ ಆರೋಪಿ.. ಈ ಕ್ಯಾಪ್ಸುಲ್‌ಗಳಲ್ಲಿ ಒಟ್ಟು 752 ಗ್ರಾಂ ಬಿಳಿ ಪುಡಿ ಪತ್ತೆಯಾಗಿದೆ. ಪರಿಶೀಲನೆ ವೇಳೆ ಇದರಲ್ಲಿ ಕೊಕೇನ್ ಇರುವುದು ದೃಢಪಡಿಪಟ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಶಪಡಿಸಿಕೊಂಡಿರುವ ಕೊಕೇನ್ ಮೌಲ್ಯ ಬರೋಬ್ಬರಿ 11 ಕೋಟಿ 28 ಲಕ್ಷ ರೂಪಾಯಿ ಎಂದು ಹೇಳಲಾಗ್ತಿದೆ. ಈ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.