ನವದೆಹಲಿ/ಗಾಜಿಯಾಬಾದ್: ಇಲ್ಲಿನ ಹೋಟೆಲ್‌ವೊಂದರಲ್ಲಿ ಡಿಜೆಯಲ್ಲಿ ತಮಗೆ ಇಷ್ಟವಾದ ಹಾಡನ್ನು ಪ್ಲೇ ಮಾಡುವ ವಿಚಾರ ಹಿಂಸಾಚಾರಕ್ಕೆ ತಿರುಗಿತ್ತು. ಘಟನೆಯಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಮಹಿಳೆಯರಿಬ್ಬರನ್ನು ಐಸಿಯುಗೆ ದಾಖಲಿಸಲಾಗಿದೆ. ಇಬ್ಬರು ಮಹಿಳೆಯರು ಸೇರಿದಂತೆ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ದಿನ ಡಿಜೆ ನುಡಿಸುವ ವಿವಾದಕ್ಕೆ ಸಂಬಂಧಿಸಿದಂತೆ ಗಾಜಿಯಾಬಾದ್‌ನ ಹೋಟೆಲ್‌ವೊಂದರಲ್ಲಿ ತೀವ್ರ ಜಗಳ ನಡೆದಿದೆ. ಹೋಟೆಲ್ ಸಿಬ್ಬಂದಿ ಮತ್ತು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಗಳ ನಡುವೆ ಗಲಾಟೆ ನಡೆದಿದ್ದು, ಈ ವೇಳೆ, ಎರಡು ಗುಂಪುಗಳು ಪರಸ್ಪರ ಕಿತ್ತಾಡಿಕೊಂಡಿವೆ. ದಾಳಿಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಜಗಳದಲ್ಲಿ ಅನೇಕರು ಗಾಯಗೊಂಡಿದ್ದು, ಗಾಯಗೊಂಡವರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಈ ಘಟನೆಗೆ ಸಂಬಂಧಿಸಿದ ಲೈವ್ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಈ ಪ್ರಕರಣವು ಗಾಜಿಯಾಬಾದ್ ಗೋವಿಂದಪುರಂನಲ್ಲಿರುವ ಹೋಟೆಲ್ ಗ್ರ್ಯಾಂಡ್ ಐಆರ್‌ಎಸ್‌ಗೆ ಸಂಬಂಧಿಸಿದೆ. ಫೆಬ್ರವರಿ 25 ರಂದು ಇಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. ಇದೇ ವೇಳೆ, ಡಿಜೆ ವಿಚಾರದಲ್ಲಿ ಜಗಳ ನಡೆದಿದೆ. ಮದುವೆಯ ಅತಿಥಿಗಳು ನಿರ್ದಿಷ್ಟ ಹಾಡನ್ನು ನುಡಿಸುವಂತೆ ಒತ್ತಾಯಿಸಿದ್ದರು. ಆದರೆ ಅವರ ಮನವಿಯನ್ನು ಹೋಟೆಲ್ ಸಿಬ್ಬಂದಿ ನಿರಾಕರಿಸಿದ್ದರು ಎನ್ನಲಾಗುತ್ತಿದೆ. ರಾತ್ರಿ ಕಳೆದಿದೆ ಹಾಗಾಗಿ ಈಗ ಡಿಜೆ ಹಾಕುವುದಿಲ್ಲ ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ ಎನ್ನಲಾಗಿದೆ.