ಡುಮ್ಕಾ (ಜಾರ್ಖಂಡ್): ಪ್ರೇತಗಳ ಮಾಟಮಂತ್ರದಲ್ಲಿ ತೊಡಗಿದ್ದಾರೆಂದು ಆರೋಪಿಸಿ ಒಂದೇ ಕುಟುಂಬದ ನಾಲ್ವರು ಮಹಿಳೆಯರಿಗೆ ಗ್ರಾಮಸ್ಥರು ಬಲವಂತವಾಗಿ ಮಲ ತಿನ್ನಿಸಿದ ಕರಾಳ ಘಟನೆ ಇಲ್ಲಿ ನಡೆದಿದೆ. ಸರಯ್ಯಹಾಟ್ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಡುಮ್ಕಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಶನಿವಾರ ಈ ಅಮಾನವೀಯ ಪ್ರಕರನ ಘಟನೆ ಬೆಳಕಿಗೆ ಬಂದಿದೆ. ದೂರಿನ ಆಧಾರದಲ್ಲಿ ಪೊಲೀಸರು ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಸರಯ್ಯಹಾಟ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ವಿನಯ್ ಕುಮಾರ್, ಪೊಲೀಸ್ ತಂಡದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಘಟನೆಯ ಬಗ್ಗೆ ವಿಚಾರಣೆ ನಡೆಸಿದ್ದಾರೆ. ನಂತರ ಸಂತ್ರಸ್ತರನ್ನು ಚಿಕಿತ್ಸೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ನಾಲ್ವರು ಸಂತ್ರಸ್ತರ ಪೈಕಿ ಇಬ್ಬರನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜ್ಯೋತಿನ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ಇತರ ಗ್ರಾಮಸ್ಥರಾದ ಮುನಿ ಸೊರೆನ್, ಲಖಿರಾಮ್ ಮುರ್ಮು, ಸುನಿಲ್ ಮುರ್ಮು, ಉಮೇಶ್ ಮುರ್ಮು ಮತ್ತು ಮಂಗಲ್ ಮುರ್ಮು ಅವರೊಂದಿಗೆ ಸಭೆ ನಡೆಸಿದ ನಂತರ ಅವರೆಲ್ಲರೂ ಸೇರಿ ಈ ಹೇಯ ಕೃತ್ಯ ನಡೆಸಲು ಪ್ರೇರೇಪಿಸಿದ್ದಾನೆ ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.
ಸರಯ್ಯಹಾಟ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ವಿನಯ್ ಕುಮಾರ್ ಮಾತನಾಡಿ, ಸಂತ್ರಸ್ತರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಅಲ್ಲದೆ ಆರು ಜನರ ವಿರುದ್ಧ ಸೆಕ್ಷನ್ 448, 323, 325, 326 ಎ, 341, 307, 504, 506, ಮತ್ತು 34 (ಮಾಟಮಂತ್ರ ತಡೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲೇ ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಅಪ್ಪಾ ಬೇಡಪ್ಪ.. ಪ್ಲೀಸ್ ಬೇಡಪ್ಪ ಅಂತಾ ಗೋಗರೆದ್ರೂ ಕರಗದ ಮನಸ್ಸು.. ಮಗನಿಗೆ ಬೆಂಕಿ ಹಚ್ಚಿ ತಂದೆ ಕ್ರೌರ್ಯ!