ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಅಪರಾಧಗಳು ಹೆಚ್ಚುತ್ತಿವೆ. ದೆಹಲಿಯ ಶಹಬಾದ್ ಡೈರಿಯಲ್ಲಿ ಬಾಲಕಿಯ ಹತ್ಯೆಯ ಬಳಿಕ ಮತ್ತೊಂದು ಅದೇ ರೀತಿಯ ಘಟನೆ ಬೆಳಕಿಗೆ ಬಂದಿದೆ. ಮೂವರು ಯುವಕರು ಗಲಾಟೆ ಮಾಡಿಕೊಳ್ಳುತ್ತಿರುವಾಗ ಒಬ್ಬ ಚಾಕುವಿನಿಂದ ತನಗಿಷ್ಟ ಬಂದಂತೆ ಎದುರಿನ ಯುವಕನಿಗೆ ಚುಚ್ಚಿದ್ದಾನೆ. ಈ ಘಟನೆ ಶಹಬಾದ್ ಡೈರಿಯ ರೀತಿಯಲ್ಲೇ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಕಾರಣ ತಿಳಿದು ಬಂದಿಲ್ಲ.
ದೆಹಲಿಯಲ್ಲಿ ನಡೆಯುತ್ತಿರುವ ಈ ರೀತಿಯ ಪ್ರಕರಣಗಳು ಜನರಲ್ಲಿ ಅಸುರಕ್ಷತೆಯ ಭಾವ ಮೂಡಿಸಿದೆ. ಕಳೆದ ವರ್ಷ ಯುವತಿಯನ್ನು 35 ತುಂಡುಗಳನ್ನಾಗಿ ಕತ್ತರಿಸಿದ ಅಫ್ತಾಬ್ ಘಟನೆ, ಈ ವರ್ಷದ ಮೊದಲ ದಿನವೇ ಕಾರಿನಡಿ ಸಿಲುಕಿದ್ದ ಯುವತಿಯನ್ನು 13 ಕಿ.ಮೀ ಎಳೆದೊಯ್ದ ಕಾಂಜಾವಾಲಾ ಪ್ರಕರಣ, ವಾರದ ಹಿಂದೆ ಯುವತಿಯ ಮೇಲೆ ಮನ ಬಂದಂತೆ ಚಾಕುವಿನಿಂದ ಚುಚ್ಚಿದ ಘಟನೆಗಳು ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದವು.
ಇದೆಲ್ಲದರ ನಡುವೆ ದೆಹಲಿ ಮತ್ತೆ ರಕ್ತ ಕಂಡಿದೆ. ಮೂವರು ಯುವಕರು ಗಲಾಟೆ ಮಾಡಿಕೊಂಡಿದ್ದು, ಒಬ್ಬ ಚಾಕುವಿನಿಂದ ಮನಸಿಚ್ಚೆ ಚುಚ್ಚುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದವನನ್ನು ರಾಜು ಪಾರ್ಕ್ ಪ್ರದೇಶದ ನಿವಾಸಿ ಸಚಿನ್ ಎಂದು ಗುರುತಿಸಲಾಗಿದೆ. ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಪ್ರಯೋಜನವಾಗಲಿಲ್ಲ. ಆತನ ಪ್ರಾಣ ವೈದ್ಯಕೀಯ ಚಿಕಿತ್ಸೆ ಸಿಗುವ ಮೊದಲೇ ರಸ್ತೆ ಮಧ್ಯೆಯೇ ಹಾರಿಹೋಗಿತ್ತು. ತೀವ್ರ ರಕ್ತಸ್ರಾವದಿಂದ ಸಚಿನ್ ಮೃತಪಟ್ಟಿದ್ದ. ಆಸ್ಪತ್ರೆಗೆ ದೇಹ ತಲುಪಿದಾಗ ಆತ ಸಾವಿಗೀಡಾಗಿವುದನ್ನು ವೈದ್ಯರು ಖಾತರಿಪಡಿಸಿದ್ದರು. ಸಿಸಿಟಿವಿ ದೃಶ್ಯದ ಆಧಾರದಲ್ಲಿ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.