ಚಂಡಿಗಢ: ಹರಿಯಾಣ ಮೂಲದ 12 ಹರೆಯದ ಬಾಲಕನೋರ್ವ ಮೂರು ಸ್ಮಾರ್ಟ್ಫೋನ್ ಆ್ಯಪ್ಗಳನ್ನು ಅಭಿವೃದ್ಧಿಪಡಿಸುವ ಮೂಲಕ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ 'ಯಂಗೆಸ್ಟ್ ಆ್ಯಪ್ ಡೆವಲಪರ್' ಎಂದು ಹೆಸರು ಗಳಿಸಿದ್ದಾನೆ. ಕಾರ್ತಿಕೇಯ ಆ್ಯಪ್ಗಳನ್ನು ಅಭಿವೃದ್ದಿಪಡಿಸಿದ ಬಾಲಕ. ಜವಾಹರ್ ನವೋದಯ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈತ ಕಿರಿಯ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾನೆ.
ಕೋವಿಡ್ ಸಂದರ್ಭದಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ನೀಡಿ ಮಕ್ಕಳಿಗೆ ಆನ್ಲೈನ್ ತರಗತಿಗಳನ್ನು ಮುಂದುವರೆಸಲು ಸರ್ಕಾರ ಸೂಚಿಸಿತ್ತು. ಕಾರ್ತಿಕೇಯನ ತಂದೆ ತನ್ನ ಮಗನ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಉಂಟಾಗದಂತೆ 10,000 ರೂಪಾಯಿ ಬೆಲೆಯ ಮೊಬೈಲ್ ಫೋನ್ ಖರೀದಿಸಿ ತಂದುಕೊಟ್ಟಿದ್ದಾರೆ. ಕೆಲವೇ ದಿನಗಳಲ್ಲಿ ಈ ಮೊಬೈಲ್ ಫೋನ್ ತಾಂತ್ರಿಕ ದೋಷದಿಂದ ಕೆಲಸ ಸ್ಥಗಿತಗೊಳಿಸಿತ್ತು. ಇದರಿಂದ ತನ್ನ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತದೆ, ಏನಾದರೂ ಪರಿಹಾರ ಕಂಡುಕೊಳ್ಳಬೇಕೆಂದು ಮೊಬೈಲ್ನಲ್ಲಿ ಕಂಡಂತಹ ದೋಷಗಳಿಗಾಗಿ ಪೋಷಕರ ಮುಖೇನ ಯೂಟ್ಯೂಬ್ನಲ್ಲಿ ಹುಡುಗ ಮಾಹಿತಿ ಪಡೆದು ಮೊಬೈಲ್ ಸರಿಪಡಿಸಿದ್ದಾನೆ.
ಇದು ಬಾಲಕನಲ್ಲಿ ಕ್ರಮೇಣ ಮೊಬೈಲ್ ಮತ್ತು ಕೋಡಿಂಗ್ ಬಗ್ಗೆ ಆಸಕ್ತಿ ಹುಟ್ಟಿಸಿದೆ. ನಂತರದ ದಿನಗಳಲ್ಲಿ ಆನ್ಲೈನ್ ಮುಖಾಂತರ ಕೋಡಿಂಗ್ ಅಭ್ಯಾಸವನ್ನೂ ಪ್ರಾರಂಭಿಸುತ್ತಾನೆ. ಇದೆಲ್ಲದರ ಪರಿಣಾಮ ಎಂಬಂತೆ ಮುಂದಿನ ದಿನಗಳಲ್ಲಿ ಮೂರು ಆ್ಯಪ್ಗಳನ್ನು ತಯಾರಿಸಿಯೇ ಬಿಟ್ಟ. ಒಂದು ಸಾಮಾನ್ಯ ಜ್ಞಾನಕ್ಕೆ, ಮತ್ತೊಂದು ಕೋಡಿಂಗ್ ಹಾಗೂ ಗ್ರಾಫಿಕ್ಸ್ಗೆ, ಮೂರನೆಯದು ಡಿಜಿಟಲ್ ಶಿಕ್ಷಣಕ್ಕಾಗಿ ಹೀಗೆ ಒಟ್ಟು ಮೂರು ಆ್ಯಪ್ಗಳನ್ನು ಅಭಿವೃದ್ದಿಪಡಿಸಿದ್ದಾನೆ. ಪ್ರಸುತ ಕಾರ್ತಿಕೇಯ ಈ ಆ್ಯಪ್ಗಳ ಮುಖಾಂತರ ಒಟ್ಟು 45,000 ಜನರಿಗೆ ಉಚಿತ ತರಬೇತಿಯನ್ನೂ ನೀಡುತ್ತಿದ್ದಾನೆ.! ಇದರ ಹೊರತಾಗಿಯೂ ವಿದ್ಯಾಭ್ಯಾಸದಲ್ಲೂ ಮುಂದಿದ್ದಾನೆ.
ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ಕಾರ್ತಿಕೇಯ ತೇರ್ಗಡೆಗೊಂಡು ವಿದ್ಯಾರ್ಥಿವೇತನ ಪಡೆದಿದ್ದಾನೆ. ಪ್ರಸ್ತುತ ಬಿ.ಎಸ್ಸಿಯಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಶಿಕ್ಷಣ ಮುಂದುವರೆಸಿದ್ದಾನೆ. ಪುಟ್ಟ ಹುಡುಗನ ಸಾಧನೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಗಮನ ಸೆಳೆದಿದ್ದು, ಕಾರ್ತಿಕೇಯನಿಗೆ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಕಾರ್ತಿಕೇಯ, "ನನಗೆ ಪ್ರಧಾನಿ ನರೇಂದ್ರ ಮೋದಿ ಅವರೆಂದರೆ ತುಂಬಾ ಇಷ್ಟ. ಅವರಿಂದ ಸ್ಫೂರ್ತಿ ಪಡೆದು ಈ ಸಾಧನೆ ಮಾಡಿದ್ದೇನೆ. ಭವಿಷ್ಯದಲ್ಲಿ ಭಾರತಕ್ಕೆ ಸೇವೆ ಸಲ್ಲಿಸುವುದು ನನ್ನ ಮಹದಾಸೆ" ಎಂದು ಹೇಳಿದ್ದಾನೆ.
ಇದನ್ನೂ ಓದಿ:ವಾಟ್ಸ್ಆ್ಯಪ್ನಲ್ಲಿ ಶೀಘ್ರವೇ 3 ಹೊಸ ಫೀಚರ್: ಗ್ರೂಪ್ಗಳಿಂದ ಯಾರಿಗೂ ತಿಳಿಯದಂತೆ ಎಕ್ಸಿಟ್ ಆಗಿ