ನವದೆಹಲಿ: ಅದಾನಿ ಗ್ರೂಪ್ ವಿರುದ್ಧ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ಮಾಡಿರುವ ವಂಚನೆಯ ವಹಿವಾಟಿನ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಗದ್ದಲ ಉಂಟುಮಾಡಿದ ಕಾರಣ, ಇಂದು ಕಲಾಪ ಪ್ರಾರಂಭವಾದ ಕೂಡಲೇ ಸಂಸತ್ತಿನ ಉಭಯ ಸದನಗಳನ್ನೂ ಮುಂದೂಡಲಾಗಿದೆ. ರಾಜ್ಯಸಭೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರೆ, ಲೋಕಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
ಇಂದು ಬೆಳಗ್ಗೆ ಸಂಸತ್ತಿನ ಮೇಲ್ಮನೆ ಸಭೆ ಸೇರಿ ಕಲಾಪ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ, ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು US ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ವಿರುದ್ಧ ಮಾಡಿರುವ ಆರೋಪದ ಕುರಿತು ಚರ್ಚಿಸುವಂತೆ ಒತ್ತಾಯಿಸಿ ವಿವಿಧ ವಿರೋಧ ಪಕ್ಷಗಳ ಸಂಸದರು ನೀಡಿದ 15 ಮುಂದೂಡಿಕೆ ನೋಟಿಸ್‌ಗಳನ್ನು ತಿರಸ್ಕರಿಸಿದರು.
ಸದನದಲ್ಲಿ ಮುಖ್ಯ ಆದೇಶ ಮತ್ತು ಪಟ್ಟಿಯಲ್ಲಿರುವ ವಿಷಯಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುವಂತೆ ವಿರೋಧ ಪಕ್ಷದ ಸಂಸದರನ್ನು ಉಪರಾಷ್ಟ್ರಪತಿ ಒತ್ತಾಯಿಸಿದ ನಂತರವೂ ವಿರೋಧ ಪಕ್ಷದ ಸಂಸದರು ತಮ್ಮ ನಿಲುವಿನಿಂದ ಹಿಂದೆ ಸರಿಯಲು ನಿರಾಕರಿಸಿದರು. ಮಾತ್ರವಲ್ಲದೇ ತಮ್ಮ ಪ್ರತಿಭಟನೆ ಹಾಗೆಯೇ ಮುಂದುವರೆಸಿದ್ದಾರೆ. ಸಂಸತ್ತು ಪ್ರಜಾಪ್ರಭುತ್ವದ ಮೂಲತತ್ತ್ವ ಮತ್ತು ಉತ್ತರ ನಕ್ಷತ್ರ ಎಂದು ಪ್ರತಿಭಟನಾನಿರತ ಸಂಸದರಿಗೆ ಒತ್ತಿ ಹೇಳಿದ ಉಪರಾಷ್ಟ್ರಪತಿ, ಇದು ಆಲೋಚನೆ ಮತ್ತು ಚರ್ಚೆಯ ಸ್ಥಳವಾಗಿರುವುದು ಹೌದು ಎನ್ನುವುದು ಆದರೆ, ಗೊಂದಲ ಸೃಷ್ಟಿಸುವ ಸ್ಥಳವಲ್ಲ ಎಂದು ಹೇಳಿದರು.
ಮಧ್ಯಾಹ್ನಕ್ಕೆ ಕಲಾಪ ಮುಂದೂಡಿಕೆ:"ನಾನು ವಿವಿಧ ಸದಸ್ಯರಿಂದ ನಿಯಮ 267ರ ಅಡಿ 15 ನೋಟಿಸ್‌ಗಳನ್ನು ಸ್ವೀಕರಿಸಿದ್ದೇನೆ. ಎಲ್ಲ ನೋಟಿಸ್‌ಗಳನ್ನು ನಾನು ಈಗಾಗಲೇ ಪರಿಶೀಲಿಸಿದ್ದು, ಇವುಗಳು ಯಾವುವು ಕೂಡ ನಿಯಮ 267 ರ ಅವಶ್ಯಕತೆಗಳನ್ನು ಪೂರೈಸದ ಕಾರಣ ಅವುಗಳನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಎಲ್ಲ ಮುಂದೂಡಿಕೆ ನೋಟಿಸ್‌ಗಳನ್ನು ತಿರಸ್ಕರಿಸಿದ್ದೇನೆ" ಎಂದು ಹೇಳಿದ ಉಪರಾಷ್ಟ್ರಪತಿ ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.