ನವದೆಹಲಿ :ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಚೀನಾದೊಂದಿಗಿನ ಗಡಿ ವಿವಾದದ ಬಗ್ಗೆ ಸರ್ಕಾರದ ನಿಲುವಿನ ಬಗ್ಗೆ ಚರ್ಚಿಸಲು ವಿರೋಧ ಪಕ್ಷಗಳು ಒತ್ತಾಯಿಸಲಿವೆ. ಎರಡೂ ಸದನಗಳಲ್ಲಿ ಚೀನಾ ಗಡಿ ವಿವಾದದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಬ್ಬರು ಮಾಜಿ ರಕ್ಷಣಾ ಮಂತ್ರಿಗಳಾದ ಎ.ಕೆ.ಆ್ಯಂಟನಿ ಮತ್ತು ಶರದ್ ಪವಾರ್ ಅವರ ಜೊತೆ ಶುಕ್ರವಾರ ಸಭೆ ನಡೆಸಿದ್ದು, ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಭೆಯಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಉಪಸ್ಥಿತರಿದ್ದರು.
ಅಷ್ಟೇ ಅಲ್ಲದೇ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಂಸತ್ ಕಾರ್ಯತಂತ್ರದ ಸಭೆ ನಡೆದಿದೆ. ಮಾನ್ಸೂನ್ ಅಧಿವೇಶನದಲ್ಲಿ ಚೀನಾದೊಂದಿಗಿನ ಗಡಿ ಸಮಸ್ಯೆಯ ಬಗ್ಗೆ ಪ್ರಶ್ನೆಗಳನ್ನು ಕೇಳಲು ನಿರ್ಧರಿಸಿದೆ.
ಇತ್ತೀಚೆಗೆ ಗಡಿಯಲ್ಲಿ ಚೀನಾದ ಹಾವಳಿ ಹೆಚ್ಚಾಗಿದೆ. ಎಲ್ಎಸಿ ಬಳಿ ಸ್ಥಳೀಯರು ಟಿಬೆಟ್ ಧರ್ಮಗುರು ದಲೈ ಲಾಮಾ ಅವರ 86ನೇ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವಾಗ ಚೀನಾದ ಸೈನಿಕರು ಅದಕ್ಕೆ ವಿರೋಧ ವ್ಯಕ್ತಪಡಿಸಿ ಬ್ಯಾನರ್ಗಳನ್ನು, ಚೀನಾ ಬಾವುಟಗಳನ್ನು ಪ್ರದರ್ಶಿಸಿದ ಘಟನೆ ನಡೆದಿದೆ. ಇನ್ನು, ಅಧಿವೇಶನವು ಜುಲೈ 19ರಂದು ಪ್ರಾರಂಭವಾಗಲಿದೆ. ಆಗಸ್ಟ್ 13ರಂದು ಕೊನೆಗೊಳ್ಳುವ ನಿರೀಕ್ಷೆಯಿದೆ.
ಇದನ್ನೂ ಓದಿ:ಕಾವೇರಿ ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡ ಕೊನೆಯುಸಿರು