ಡಿಸ್ಪುರ್ (ಅಸ್ಸಾಂ):ಅಸ್ಸೋಂ ಮತ್ತು ಮಿಜೋರಾಂ ಗಡಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ಜನರು ಮತ್ತು ಪೊಲೀಸರನ್ನು ಹಿಂಸಾಚಾರದಲ್ಲಿ ತೊಡಗಿಸಿಕೊಳ್ಳದಂತೆ ಮತ್ತು ಶಾಂತಿ ಪುನಃ ಸ್ಥಾಪಿಸಲು ಕೆಲಸ ಮಾಡುವಂತೆ ಕೋರಿ ಅಸ್ಸೋಂ ಸರ್ಕಾರ ಮಿಜೋರಾಂ ಸರ್ಕಾರಕ್ಕೆ ಮನವಿ ಮಾಡಿದೆ.
ಘಟನೆ ವಿವರ: ಜುಲೈ 26 ರಂದು ಅಸ್ಸೋಂ 200ಕ್ಕೂ ಹೆಚ್ಚು ಪೊಲೀಸರು ಮಿಜೋರಾಂ ಗಡಿಗೆ ಆಗಮಿಸಿ ಆಟೋ ನಿಲ್ದಾಣದಲ್ಲಿದ್ದ ಪೊಲೀಸರನ್ನು ಒತ್ತಾಯ ಪೂರ್ವಕವಾಗಿ ಕಳುಹಿಸಿದ್ದಾರೆ. ಈ ಸಮಯದಲ್ಲಿ ಉಂಟಾದ ಘರ್ಷಣೆಯಲ್ಲಿ ಮಿಜೋರಾಂ ಪೊಲೀಸರು ಸಹ ಪ್ರತಿದಾಳಿ ಮಾಡಿದ್ದಾರೆ ಎಂದು ಮಿಜೋರಾಂ ಸರ್ಕಾರ ಹೇಳಿಕೆ ನೀಡಿತ್ತು. ಆದರೆ, ಅಸ್ಸೋಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದು, ಮಿಜೋರಾಂ ಪೊಲೀಸರು ನಮ್ಮ ಗಡಿ ಪೊಲೀಸ್ ಠಾಣೆಯನ್ನು ಆಕ್ರಮಿಸಿಕೊಂಡಿದ್ದರು.
ಅದನ್ನು ಮರಳಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ ಎಂದಿದ್ದಾರೆ. ಅಸ್ತಿತ್ವದಲ್ಲಿರುವ ಒಪ್ಪಂದಗಳನ್ನು ಉಲ್ಲಂಘಿಸಿ, ಮಿಜೋರಾಂ ಸರ್ಕಾರವು ಅಸ್ಸೋಂ ರೆಂಗ್ಟಿ ಬಸ್ತಿ ಕಡೆಗೆ ರಸ್ತೆ ನಿರ್ಮಿಸಲು ಪ್ರಾರಂಭಿಸಿದೆ. ಅಷ್ಟೇ ಅಲ್ಲದೆ, ಲೈಲಾಪುರ ಪ್ರದೇಶದ ಇನ್ನರ್ ಲೈನ್ ರಿಸರ್ವ್ ಫಾರೆಸ್ಟ್ ಅನ್ನು ನಾಶಪಡಿಸಿದೆ ಎಂದು ಅಸ್ಸೋಂ ಆರೋಪಿಸಿದೆ.
ರಾಜ್ಯಗಳಲ್ಲಿ ಹಿಂಸಾಚಾರ ಭುಗಿದೇಳುತ್ತಿದ್ದ ಸಂದರ್ಭದಲ್ಲಿಯೇ ಹಿಮಂತ ಬಿಸ್ವಾ ಶರ್ಮಾ ಮಿಜೋರಾಂ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ರಮವಾಗಿ ಅಸ್ಸೋಂ ಮತ್ತು ಮಿಜೋರಾಂನ ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವಾ ಶರ್ಮಾ ಮತ್ತು ಜೋರಮಾಥಂಗಾ ಅವರೊಂದಿಗೆ ಮಾತನಾಡಿ, ವಿವಾದಿತ ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳಬೇಕು ಮತ್ತು ಸೌಹಾರ್ದಯುತ ಇತ್ಯರ್ಥವನ್ನು ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.