ಬಲೋದ್ (ಛತ್ತೀಸ್‌ಗಢ): ಛತ್ತೀಸ್‌ಗಢದ ಬಲೋದ್ ಜಿಲ್ಲೆಯಲ್ಲಿ 20 ವರ್ಷಗಳ ಬಳಿಕ ಕೊಲೆ ಪ್ರಕರಣ ಬಯಲಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿ ಶವವನ್ನು ಹೂತು ಹಾಕಿದ್ದು, ಇದೀಗ ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ. ಇದರ ಪರಿಣಾಮ ಮೃತನ ಮೂಳೆಗಳನ್ನು ಪೊಲೀಸರು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಇಲ್ಲಿನ ಕಾರ್ಕಭಟ್ ಗ್ರಾಮದ ನಿವಾಸಿ ಟಿಕಮ್ ಕೊಲಿಯಾರ ಎಂಬಾತನೇ ಕೊಲೆ ಆರೋಪಿಯಾಗಿದ್ದು, ಸ್ನೇಹಿತ ಛಬೇಶ್ವರ್ ಗೋಯಲ್ ಎಂಬಾತ ಕೊಲೆಯಾದವ ಎಂದು ತಿಳಿದು ಬಂದಿದೆ. 2003ರಲ್ಲಿ ಯುವತಿಯ ವಿಷಯವಾಗಿ ಛಬೇಶ್ವರ್ ಗೋಯಲ್ನನ್ನು ಟಿಕಮ್ ಕೊಂದು ಶವವನ್ನು ಹೂತು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಶವ ಹೂತಿಟ್ಟಿರುವ ಬಗ್ಗೆ ಹಂತಕ ಬಾಯ್ಬಿಟ್ಟಿದ್ದಾನೆ. ಅಂತೆಯೇ, ಪೊಲೀಸರು ಗ್ರಾಮಕ್ಕೆ ಆಗಮಿಸಿ ಆರೋಪಿ ತೋರಿಸಿದ ಸ್ಥಳದಲ್ಲಿ ಮಣ್ಣು ಅಗೆಯುವಾಗ ಮೂಳೆಗಳು ಪತ್ತೆಯಾಗಿದೆ. ಇದರಿಂದ ಕಾರ್ಕಭಟ್ ಸೇರಿದಂತೆ ಸುತ್ತ - ಮುತ್ತಲಿನ ಗ್ರಾಮಸ್ಥರು ಕೂಡ ಬೆಚ್ಚಿ ಬೀಳಿಸುವಂತೆ ಮಾಡಿದೆ.
ಏನಿದು ಪ್ರಕರಣ?: 2003ರಲ್ಲಿ ಟಿಕಮ್ ಮತ್ತು ಛಬೇಶ್ವರ್ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಆಗ ಅವರಿಬ್ಬರೂ 18 ವರ್ಷದವರಾಗಿದ್ದರು. ಆದರೆ, ಟಿಕಮ್‌ನ ಆಗಿನ ಗೆಳತಿ (ಈಗ ಪತ್ನಿ) ಬಗ್ಗೆ ಛಬೇಶ್ವರ್‌ಗೆ ಒಳ್ಳೆಯ ಉದ್ದೇಶವಿರಲಿಲ್ಲ. ಆಕೆಗೆ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ. ಈ ವಿಷಯವು ಟಿಕಮ್ಗೆ ಗೊತ್ತಾಗಿತ್ತು. ಅಂತೆಯೇ, ಛಬೇಶ್ವರ್‌ಗೆ ರಾಡ್‌ನಿಂದ ಹೊಡೆದು ಟಿಕಮ್ ಕೊಲೆ ಮಾಡಿದ್ದ. ನಂತರ ಮೃತದೇಹವನ್ನು ಹೂತು ಹಾಕಿದ್ದ ಎಂಬುವುದು ತನಿಖೆಯಲ್ಲಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆಯೇ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದರು. ಆದರೆ, ಆ ಸಂದರ್ಭದಲ್ಲಿ ಟಿಕಮ್ ಮಾನಸಿಕ ಅಸ್ವಸ್ಥ ಎಂದು ಘೋಷಿಸಲ್ಪಟ್ಟಿದ್ದರಿಂದ ತನಿಖೆಯು ಅಪೂರ್ಣವಾಗಿತ್ತು. ಮತ್ತೊಂದೆಡೆ, ಛಬೇಶ್ವರ್ ತಂದೆ ಜಗದೀಶ್ ಗೋಯಲ್ ಪ್ರಕರಣದ ಮರು ತನಿಖೆಗೆ ಒತ್ತಾಯ ಮಾಡುತ್ತಲೇ ಬಂದಿದ್ದರು. ಈ ಕುರಿತು ಹಲವಾರು ಅರ್ಜಿಗಳನ್ನೂ ಸಲ್ಲಿಸಿದ್ದರು. ಕೊನೆಗೆ ಛಬೇಶ್ವರ್ ಪ್ರಕರಣದ ಬಗ್ಗೆ ಈ ವರ್ಷ ಮತ್ತೆ ತನಿಖೆ ಆರಂಭಿಸಲಾಗಿತ್ತು.