ನವದೆಹಲಿ: ಕಳೆದ ಎರಡು ವಾರಗಳಿಂದ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.
ಇತರ ದೇಶಗಳಿಗೆ ಹೋಲಿಸಿದರೆ COVID ಬಿಕ್ಕಟ್ಟನ್ನು ಭಾರತ ಉತ್ತಮವಾಗಿ ನಿರ್ವಹಿಸುತ್ತಿದೆ. ಆದರೂ ಅನೇಕ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ಧೇವೆ. ಈ ಹಿನ್ನೆಲೆಯಲ್ಲಿ ನಾವೆಲ್ಲ ಈಗ ಎಚ್ಚರದಿಂದ ಇರಬೇಕು. ಕೋವಿಡ್ ಸವಾಲನ್ನು ಇನ್ನೂ ಸಂಪೂರ್ಣವಾಗಿ ಎದುರಿಸಲು ಸಾಧ್ಯವಾಗಿಲ್ಲ. ಹೀಗಾಗಿ ನಾವೆಲ್ಲ ಮುಂಬರುವ ಸವಾಲುಗಳನ್ನು ಒಟ್ಟಾಗಿ ಎದುರಿಸಬೇಕಾಗಿದೆ. ಅದಕ್ಕೆ ನೀವೆಲ್ಲ ತಯಾರಾಗಿರಿ, ಜನರಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿ ಎಂದು ಪ್ರಧಾನಿ ಕರೆ ನೀಡಿದ್ದಾರೆ.
ದೇಶದ ಶೇ 96 ರಷ್ಟು ವಯಸ್ಕರರು ಕೋವಿಡ್ನಿಂದ ರಕ್ಷಣೆ ಪಡೆಯಲು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಶೇ 85ರಷ್ಟು ಜನರು COVID ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಇದು ನಾವೆಲ್ಲ ಹೆಮ್ಮೆ ಪಡಬೇಕಾದ ಸಂಗತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಓದಿ:ಮಂಗಳೂರು ಪ್ರವಾಸ ಮುಂದೂಡಿ ವಿಮಾನ ನಿಲ್ದಾಣದಿಂದ ವಾಪಸ್ ಆದ ಸಿಎಂ
ಈ ವರ್ಚುಯಲ್ ಸಭೆ ಮಧ್ಯಾಹ್ನ 12 ಗಂಟೆಗೆ ಆರಂಭವಾಗಿದ್ದು, ಸಿಎಂ ಬೊಮ್ಮಾಯಿ ಸೇರಿದಂತೆ ಬೇರೆ-ಬೇರೆ ರಾಜ್ಯಗಳ ಸಿಎಂ ಮತ್ತು ಆರೋಗ್ಯ ಸಚಿವರು ಭಾಗಿಯಾಗಿದ್ದಾರೆ. ಪ್ರಧಾನ ಮಂತ್ರಿ ಮತ್ತು ಪ್ರಧಾನ ಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಆಯಾ ಸಚಿವಾಲಯಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಈ ಹಿಂದೆಯೂ ಸಹ ಪ್ರಧಾನಿ ಮೋದಿ ಕೋವಿಡ್ ವಿಷಯವಾಗಿ ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದಾರೆ. ಭಾರತದಲ್ಲಿ ಕಳೆದ ಎರಡು ದಿನಗಳಿಂದಹೊಸ ಕೋವಿಡ್ ಸೋಂಕುಗಳ ಸಂಖ್ಯೆಯಲ್ಲಿ ಸ್ಥಿರವಾಗಿ ಇಳಿಕೆ ಕಾಣುತ್ತಿತ್ತು. ಆದರೆ, ಕಳೆದ 24 ಗಂಟೆಯಲ್ಲಿ ಭಾರಿ ಏರಿಕೆ ಕಂಡಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,927 ಹೊಸ ಪ್ರಕರಣಗಳು ದಾಖಲೆಯಾಗಿವೆ. ಕೊರೊನಾ ಪಾಸಿಟಿವ್ ದರವು ಶೇ 0.58ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ತಿಳಿಸಿದೆ.
ಭಾನುವಾರದ ‘ಮನ್ ಕಿ ಬಾತ್’ ರೇಡಿಯೋ ಪ್ರಸಾರದಲ್ಲಿ ಪ್ರಧಾನಿ ಮೋದಿ, ಕೋವಿಡ್ ವಿಚಾರವಾಗಿ ಜಾಗರೂಕರಾಗಿರಿ ಎಂದು ಜನರಿಗೆ ತಿಳಿಸಿದ್ದರು. ಕೋವಿಡ್ ನಿಯಂತ್ರಣಕ್ಕಾಗಿ ಜನರು ಮಾಸ್ಕ್ ಧರಿಸಿ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ಎಂದು ಸಲಹೆ ನೀಡಿದ್ದರು.