ನವದೆಹಲಿ:ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟ ರಚನೆ ಬಗ್ಗೆ ವರಿಷ್ಠರ ಜೊತೆ ಸಂಪೂರ್ಣವಾಗಿ ಚರ್ಚೆ ನಡೆಸಿದ್ದೇವೆ. ಈ ವೇಳೆ ಕೆಲವೊಂದು ಮಹತ್ವದ ಸಲಹೆ-ಸೂಚನೆ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಯಾರು ಸಚಿವರಾಗುತ್ತಾರೆ, ಯಾರೆಲ್ಲ ಉಪಮುಖ್ಯಮಂತ್ರಿ ಆಗುತ್ತಾರೆ ಎಂಬುದಕ್ಕೆ ಮಂಗಳವಾರ ರಾತ್ರಿ ಉತ್ತರ ಸಿಗಲಿದೆ. ಈ ವಿಚಾರದಲ್ಲಿ ವರಿಷ್ಠರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದು, ಅದು ಅಂತಿಮ ಎಂದು ತಿಳಿಸಿದ್ದಾರೆ.
ನಾಳೆ ರಾತ್ರಿ ನೂತನ ಸಚಿವರ ಪಟ್ಟಿ ಪ್ರಕಟ ಎಂದ ಬೊಮ್ಮಾಯಿ ಮಂಗಳವಾರ ರಾತ್ರಿ ಹೈಕಮಾಂಡ್ನಿಂದ ನೂತನ ಸಚಿವರ ಪಟ್ಟಿ ಪ್ರಕಟವಾಗಲಿದ್ದು, ಯಾರು, ಎಷ್ಟು ಜನ ಸಚಿವರಾಗುತ್ತಾರೆಂದು ಗೊತ್ತಾಗುತ್ತೆ. ಡಿಸಿಎಂ ಸ್ಥಾನಗಳ ಬಗ್ಗೆಯೂ ಕೂಡ ಅಂತಿಮವಾಗಲಿದೆ. ಹೈಕಮಾಂಡ್ ಕೈಯಲ್ಲಿ ನಾವು ಎರಡು-ಮೂರು ಪಟ್ಟಿ ಕೊಟ್ಟಿದ್ದೇವೆ. ಸಂಸತ್ ಅಧಿವೇಶನದ ಬಳಿಕ ವರಿಷ್ಠರು ಸಭೆ ಸೇರಿ ಪಟ್ಟಿ ಅಂತಿಮಗೊಳಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಬಸವರಾಜ ಬೊಮ್ಮಾಯಿ ಇದೀಗ ಸಚಿವ ಸಂಪುಟ ರಚನೆಯ ಕೆಲಸದಲ್ಲಿ ಫುಲ್ ಬ್ಯುಸಿಯಾಗಿದ್ದು, ಅದೇ ಕಾರಣಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ ಮಾಡಿದ್ದರು.
ಸೋಮವಾರ ರಾತ್ರಿ ದೆಹಲಿಯ ಮೋತಿಲಾಲ್ ನೆಹರು ಮಾರ್ಗ್ನಲ್ಲಿರುವ ಜೆ.ಪಿ.ನಡ್ಡಾ ನಿವಾಸದಲ್ಲಿ ಅವರನ್ನು ಭೇಟಿಯಾಗಿ ಸಂಪುಟ ರಚನೆ ಬಗ್ಗೆ ಸಿಎಂ ಬೊಮ್ಮಾಯಿ ಚರ್ಚಿಸಿದ್ದಾರೆ. ಈ ವೇಳೆ, ಸಿಎಂ ಬೊಮ್ಮಾಯಿ ಜತೆ ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಇದ್ದರು.
ಇದನ್ನೂ ಓದಿರಿ: ಸ್ನೇಹಿತರ ಭೇಟಿಗೆ ಹೋಗಿ ಹಿಂದಿರುಗುವಾಗ ಅಪಘಾತ.. ವಿದ್ಯಾರ್ಥಿನಿ ಸಾವು
ಕಳೆದ ಕೆಲ ದಿನಗಳ ಹಿಂದೆ ಕೂಡ ದೆಹಲಿಗೆ ತೆರಳಿದ್ದ ಬೊಮ್ಮಾಯಿ ಇದೇ ವಾರದಲ್ಲಿ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದ್ದು, ಅನುಭವಿ ಹಾಗೂ ಹೊಸ ಚಿಂತನೆ ಮಾಡುವ ಪಡೆಗೆ ಮಣೆ ಹಾಕಲಾಗುವುದು ಎಂದಿದ್ದರು.