ಮುಂಬೈ (ಮಹಾರಾಷ್ಟ್ರ): ಮಕ್ಕಳ ತ್ವಚೆಗೆ ಬಳಸುವ ಜನಪ್ರಿಯ ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಟಾಲ್ಕಂ ಪೌಡರ್ ಕುರಿತು ಮಹಾರಾಷ್ಟ್ರದ ಬಾಂಬೆ ಹೈಕೋರ್ಟ್ ಶುಕ್ರವಾರ ಮಹತ್ವದ ಆದೇಶ ನೀಡಿದೆ. ಈ ಬೇಬಿ ಪೌಡರ್ ಬಳಕೆ ಬಗ್ಗೆ ಹೊಸ ಪರೀಕ್ಷೆ ಕೈಗೊಳ್ಳಲು ಮತ್ತು ಪ್ರತಿಕೂಲ ಫಲಿತಾಂಶಗಳಿದ್ದಲ್ಲಿ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರ್ಕಾರಕ್ಕೆ ಉಚ್ಛ ನ್ಯಾಯಾಲಯ ಅನುಮತಿ ನೀಡಿದೆ.
ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ ಅನ್ನು ಮಕ್ಕಳ ತ್ವಚೆಗೆ ಮುದ ನೀಡಲಿ ಎಂದು ಬಳಕೆ ಮಾಡಲಾಗುತ್ತಿದೆ. ಆದರೆ, ಇದರ ಮಾದರಿ ಪರೀಕ್ಷೆಗಳು ಮೊದಲ ಬಾರಿಗೆ ಉತ್ಪನ್ನವು ಗುಣಮಟ್ಟವನ್ನು ಹೊಂದಿಲ್ಲ ಎಂಬುವುದನ್ನು ಬಹಿರಂಗ ಪಡಿಸಿತ್ತು. ಅಲ್ಲದೇ, ಈ ಪೌಡರ್ ನವಜಾತ ಶಿಶುಗಳ ಚರ್ಮದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಆರೋಪ ಕೇಳಿ ಬಂದಿತ್ತು. ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ನಿಯಂತ್ರಿಸಲು ಬಳಸುವ ಪ್ರಕ್ರಿಯೆಯಿಂದಾಗಿ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಬೇಬಿ ಪೌಡರ್ ವಿವಾದಕ್ಕೆ ಸಿಲುಕಿತ್ತು.
ಹೊಸ ಪರೀಕ್ಷೆ ನಡೆಸುವಂತೆ ಕೋರ್ಟ್ ಸೂಚನೆ:ಈ ಕಂಪನಿಯ ಪೌಡರ್ ಅನ್ನು ಪ್ರಯೋಗಾಲಯಲ್ಲಿ ನಡೆಸಿದ ಪರೀಕ್ಷೆಯ ವೇಳೆ ಪಿಎಚ್ ಮಾನದಂಡ ನಿಗದಿಗಿಂತಲೂ ಕಡಿಮೆ ಇರುವುದು ಕಂಡು ಬಂದಿದೆ. ಕೋಲ್ಕತ್ತಾ ಮೂಲದ ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿ ಈ ವರದಿ ನೀಡಿದೆ ಎಂದು ಹೇಳಿ ಪೌಡರ್ನ ಉತ್ಪಾದನೆಗೆ ನೀಡಿದ ಪರವಾನಗಿಯನ್ನು ಈ ಹಿಂದೆ ಮಹಾರಾಷ್ಟ್ರದ ಆಹಾರ ಮತ್ತು ಔಷಧಗಳ ಇಲಾಖೆ ರದ್ದು ಮಾಡಿತ್ತು.
ಆದರೆ, ತನ್ನ ಪೌಡರ್ ಕುರಿತು ಕೇಳಿ ಬಂದಿದ್ದ ಆರೋಪಗಳನ್ನು ಕಂಪನಿ ತಳ್ಳಿ ಹಾಕಿತ್ತು. ಅಲ್ಲದೇ, ಸಂಗ್ರಹವಾದ ಪೌಡರ್ ದಾಸ್ತಾನು ಮಾರಾಟ ಮಾಡಲು ಅನುಮತಿ ನೀಡುವಂತೆ ಕಂಪನಿ ನ್ಯಾಯಾಲಯದ ಮೊರೆ ಹೋಗಿತ್ತು. ಇಂದು ಬಾಂಬೆ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಜಿಎಸ್ ಪಟೇಲ್ ಮತ್ತು ಪಿಡಿ ನಾಯಕ್ ಅವರಿದ್ದ ಪೀಠವು ಪೌಡರ್ಅನ್ನು ಹೊಸ ಪರೀಕ್ಷೆಯನ್ನು ಕೈಗೊಳ್ಳುವಂತೆ ಆದೇಶಿಸಿದೆ.