ಮುಂಬೈ : ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಆಮ್ಲಜನಕದ ಬೇಡಿಕೆಯನ್ನು ಪೂರೈಸಲು ಹೊಸ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಮತ್ತು ಆಮ್ಲಜನಕ ಉತ್ಪಾದನಾ ಘಟಕವನ್ನು ಸ್ಥಾಪಿಸುವಂತೆ ಬಾಂಬೆ ಹೈಕೋರ್ಟ್ ಶಿರಡಿ ಸಾಯಿಬಾಬಾ ಸಂಸ್ಥೆಗೆ ಆದೇಶಿಸಿದೆ. ಅಲ್ಲದೆ, ಔರಂಗಾಬಾದ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಬೇಡಿಕೆ ಆಧಾರದಲ್ಲಿ ಆಮ್ಲಜನಕ ಒದಗಿಸುವಂತೆ ಸೂಚಿಸಿದೆ.
ನ್ಯಾಯಮೂರ್ತಿ ಎಸ್. ವಿ. ಗಂಗಾಪುರ್ವಾಲ ಮತ್ತು ನ್ಯಾಯಮೂರ್ತಿ ಎಸ್. ಡಿ ಕುಲಕರ್ಣಿ ಅವರನ್ನೊಳಗೊಂಡ ನ್ಯಾಯಪೀಠವು ಶಿರಡಿ ಸಾಯಿಬಾಬ ಸಂಸ್ಥೆಗೆ ಪ್ರಯೋಗಾಲಯ ಸ್ಥಾಪಿಸಲು ಅನುಮತಿ ನೀಡಿ ಆದೇಶಿಸಿದೆ. ಹಾಗಾಗಿ, 1.05 ಕೋಟಿ ರೂ. ವೆಚ್ಚದಲ್ಲಿ ಲ್ಯಾಬ್ ಸ್ಥಾಪಿಸಲಾಗುತ್ತದೆ. ಅಲ್ಲಿ ಕೋವಿಡ್ ಮತ್ತು ಇತರ ರೋಗಗಳ ಪರೀಕ್ಷೆಗಳು ನಡೆಯಲಿವೆ.
ಸಂಜಯ್ ಕಾಲೆ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಲ್ಯಾಬ್ ಸ್ಥಾಪಿಸಲು ಕ್ರಮಕೈಗೊಳ್ಳುವಂತೆ ಸಾಯಿಬಾಬಾ ಸಂಸ್ಥೆಗೆ ಸೂಚಿಸಿದೆ. ಶಿರಡಿ ಸಾಯಿಬಾಬಾ ಸಂಸ್ಥೆಯ ಅಧೀನದ ಭಕ್ತಿ ನಿವಾಸ್ ಮತ್ತು ದೇವಾಲಯದ ಟ್ರಸ್ಟ್‌ನ ಇತರ ಕಟ್ಟಡಗಳನ್ನು ಸುಸಜ್ಜಿತ ಆಸ್ಪತ್ರೆಯನ್ನಾಗಿ ಪರಿವರ್ತಿಸುವಂತೆ ಸಂಜಯ್ ಕಾಲೆ ಪಿಐಎಲ್ನಲ್ಲಿ ಕೋರಿದ್ದರು.
ಕೋವಿಡ್ -19 ರೋಗಿಗಳಿಗಾಗಿ ಸಾಯಿಬಾಬಾ ಟ್ರಸ್ಟ್ ಈಗಾಗಲೇ ಕಟ್ಟಡಗಳನ್ನು ಗೊತ್ತುಪಡಿಸಿದೆ ಮತ್ತು ಈ ಕಟ್ಟಡಗಳಲ್ಲಿ ರೋಗಿಗಳಿಗೆ ಸುಮಾರು 520 ಹಾಸಿಗೆಗಳು ಲಭ್ಯವಿದೆ ಎಂದು ಮಹಾರಾಷ್ಟ್ರ ಸರ್ಕಾರ ನ್ಯಾಯಾಲಯದಲ್ಲಿ ವಾದಿಸಿತ್ತು.
ಸಂಸ್ಥೆಯು ಈಗಾಗಲೇ ನರ್ಸ್ಗಳು, ಇತರ ಸಿಬ್ಬಂದಿ ಹಾಗೂ ಮತ್ತು ವೈದ್ಯರನ್ನು ಕೂಡ ನೇಮಕ ಮಾಡಿದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಒಪ್ಪಂದದ ಪ್ರಕಾರ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನಿರಾಕರಿಸಿದರೆ, ನರ್ಸ್ಗಳು ಮತ್ತು ವೈದ್ಯರನ್ನು ಮತ್ತಷ್ಟು ನೇಮಕ ಮಾಡಲು ಸಾಧ್ಯವಿಲ್ಲ. ಆರ್ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಲು ಕೆಲವು ಸಿಬ್ಬಂದಿಯನ್ನು ಈಗಾಗಲೇ ನೇಮಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಸಂಸ್ಥೆಯಿಂದ ಕೋವಿಡ್ ರೋಗಿಗಳಿಗೆ ಔಷಧಿ ಮತ್ತು ಇತರ ಸೌಲಭ್ಯಗಳನ್ನು ಪಿಐಎಲ್ ಕೋರಿತ್ತು.