ಕಡಪ(ಆಂಧ್ರಪ್ರದೇಶ):ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐ(ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್) ಅನೇಕ ಕಠಿಣ ಕ್ರಿಮಿನಲ್ ಕೇಸ್ ಪರಿಹರಿಸುವಲ್ಲಿ ಯಶಸ್ವಿಯಾಗಿದೆ. ಅಂತಹ ತನಿಖಾ ಸಂಸ್ಥೆಗೆ ಯಾರಾದ್ರೂ ಬೆದರಿಕೆ ಹಾಕಲು ಸಾಧ್ಯವೇ? ಅದು ಸಾಧ್ಯವಿಲ್ಲ ಎಂದುಕೊಂಡಿದ್ದರೆ ನಿಮ್ಮ ಊಹೆ ನಿಜಕ್ಕೂ ತಪ್ಪು. ಆಂಧ್ರಪ್ರದೇಶದ ಕಡಪದಲ್ಲಿ ವಿವೇಕ್ ಹತ್ಯೆ ಪ್ರಕರಣದ ಸತ್ಯಾಸತ್ಯತೆ ಹೊರತರುವ ಕೆಲಸ ಮಾಡ್ತಿರುವ ಸಿಬಿಐ ಸಿಬ್ಬಂದಿಗೆ ಬಾಂಬ್ ಹಾಕುವ ಬೆದರಿಕೆ ಹಾಕಲಾಗಿದೆ.
ತನಿಖೆ ನಡೆಸುತ್ತಿರುವ ಸಿಬಿಐ ಸಿಬ್ಬಂದಿ ಕಡಪದಿಂದ ವಾಪಸ್ ಹೋಗದಿದ್ದರೆ ಬಾಂಬ್ ಹಾಕಲಾಗುವುದು ಎಂದು ಬೆದರಿಕೆ ಹಾಕಲಾಗಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವಿವೇಕ್ ಕೊಲೆ ಪ್ರಕರಣ ಸಿಬಿಐಗೆ ಹಸ್ತಾಂತರ ಮಾಡಲಾಗಿದ್ದು, ಇದರ ತನಿಖೆ ನಡೆಸುತ್ತಿರುವ ಸಿಬ್ಬಂದಿ ಇದೀಗ ಬೆದರಿಕೆ ಎದುರಿಸುವಂತಾಗಿದೆ.
ಕಡಪದಲ್ಲಿ ಸದ್ಯ ಸಿಬಿಐನ ಒಬ್ಬ ಎಸ್ಐ ಮತ್ತು ಮೂವರು ಸಿಬ್ಬಂದಿ ಇದ್ದಾರೆ. ಅಲ್ಲಿನ ಅತಿಥಿ ಗೃಹದಲ್ಲಿ ಅವರು ಉಳಿದುಕೊಂಡಿದ್ದಾರೆ. ಕಳೆದ ಮೇ. 8ರಂದು ಮಧ್ಯಾಹ್ನ ಕೇಂದ್ರ ಕಾರಾಗೃಹದಿಂದ ಮಧ್ಯಾಹ್ನದ ಊಟ ತರಲು ಚಾಲಕ ಬಲಿಬಾಷಾ ಸಿಬಿಐನ ಇನ್ನೋವಾ ಕಾರಿನಲ್ಲಿ ತೆರಳಿದ್ದರು. ಈ ವೇಳೆ ಹಳೆ ಬೈಪಾಸ್ ಪದ್ಮಾವತಿ ಸ್ಟ್ರೀಟ್ನಿಂದ ಬರುತ್ತಿದ್ದ ವೇಳೆ ವಾಹನ ಅಡ್ಡಗಟ್ಟಿರುವ ಮುಸುಕುಧಾರಿಯೊಬ್ಬ, ಬಾಂಬ್ ಇಡುವ ಬೆದರಿಕೆ ಹಾಕಿದ್ದಾನೆ ಎಂದು ಚಾಲಕ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ವಿವೇಕ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತಂಡ ತಕ್ಷಣವೇ ಕಡಪ ತೊರೆಯುವಂತೆ ಬೆದರಿಕೆ ಹಾಕಿದ್ದಾನೆಂದು ಹೇಳಿಕೊಂಡಿದ್ದಾರೆ.