ಕರ್ನಾಟಕ

karnataka

ETV Bharat / bharat

ಸಿಎಂ ಪಿಣರಾಯಿ ವಿಜಯನ್​ ಬಳಿಕ, ಕೇರಳ ಸೆಕ್ರೆಟರಿಯೇಟ್‌ ಕಚೇರಿಗೆ ಬಾಂಬ್ ಸ್ಫೋಟ ಬೆದರಿಕೆ - Bomb squad Search operation

ಕೇರಳ ಸರ್ಕಾರದ ಕಾರ್ಯದರ್ಶಿ ಕಚೇರಿಗೆ ಬಾಂಬ್​ ಇಟ್ಟಿದ್ದಾಗಿ ಪೊಲೀಸ್​ ಕಂಟ್ರೋಲ್​ ರೂಮಿಗೆ ಕರೆ ಬಂದಿದೆ. ಕೆಲ ದಿನಗಳ ಹಿಂದೆ ಸಿಎಂ ಕೊಲೆ ಬೆದರಿಕೆ ಹಾಕಲಾಗಿತ್ತು.

ಬಾಂಬ್ ಸ್ಫೋಟ ಬೆದರಿಕೆ
ಬಾಂಬ್ ಸ್ಫೋಟ ಬೆದರಿಕೆ

By ETV Bharat Karnataka Team

Published : Nov 9, 2023, 3:51 PM IST

ತಿರುವನಂತಪುರಂ:ಕೇರಳ ಸಿಎಂ ಪಿಣರಾಯಿ ವಿಜಯನ್​​ ಕೊಲೆ ಬೆದರಿಕೆ ಬೆನ್ನಲ್ಲೇ, ಕಾರ್ಯದರ್ಶಿ ಕಚೇರಿಗೆ ಬಾಂಬ್​ ಸ್ಫೋಟದ ಬೆದರಿಕೆ ಬಂದಿದೆ. ಅನಾಮಧೇಯ ವ್ಯಕ್ತಿಯೊಬ್ಬರು ಪೊಲೀಸ್​ ಹೆಡ್​ಕ್ವಾರ್ಟರ್ಸ್​ಗೆ ಕರೆ ಮಾಡಿ ಸೆಕ್ರೆಟರಿಯೇಟ್‌ನಲ್ಲಿ ಬಾಂಬ್​ ಇಡಲಾಗಿದೆ ಎಂದು ಹೇಳಿದ್ದಾನೆ. ತಪಾಸಣೆಯ ಬಳಿಕ ಇದು ಹುಸಿ ಕರೆ ಎಂದು ತಿಳಿದು ಬಂದಿದೆ.

ಗುರುವಾರ ಬೆಳಗ್ಗೆ ಕೇರಳದ ಪೊಲೀಸ್ ಹೆಡ್‌ಕ್ವಾರ್ಟರ್ಸ್‌ಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ, ಕಚೇರಿಯನ್ನು ಬಾಂಬ್ ಸ್ಫೋಟಿಸಿ ಧ್ವಂಸ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾನೆ. ಕರೆ ಸ್ವೀಕರಿಸಿದ ಪೊಲೀಸರು ತಕ್ಷಣವೇ ಎಚ್ಚೆತ್ತುಕೊಂಡು ಬಾಂಬ್ ಸ್ಕ್ವಾಡ್ ದಳ ಶೋಧ ನಡೆಸಿದೆ. ಇವರ ಜೊತೆಗೆ ಕಂಟೋನ್ಮೆಂಟ್ ಪೊಲೀಸರು ಸಹ ಪರಿಶೀಲನೆ ನಡೆಸಿದರು.

ಸರ್ಕಾರದ ಕಾರ್ಯದರ್ಶಿ ಕಚೇರಿಯನ್ನು ಜಾಲಾಡಿದ ಬಳಿಕ ಇದೊಂದು ಹುಸಿ ಕರೆ ಎಂದು ಗೊತ್ತಾಗಿದೆ. ಅನಾಮಧೇಯ ವ್ಯಕ್ತಿ ಎಲ್ಲಿಂದ ಕರೆ ಮಾಡಿದ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಾರ್ಯದರ್ಶಿ ಕಚೇರಿಗೆ ಬೆದರಿಕೆ ಕರೆ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಶೋಧದ ಬಳಿಕ ಕಚೇರಿ ಸಿಬ್ಬಂದಿ ನಿಟ್ಟುಸಿರು ಬಿಟ್ಟರು.

ಸಿಎಂಗೆ ಬೆದರಿಕೆ ಹಾಕಿದ್ದ ಬಾಲಕ:ವಾರದ ಹಿಂದಷ್ಟೆ 11 ವರ್ಷದ ಬಾಲಕನೊಬ್ಬ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರಿಗೆ ಕೊಲೆ ಬೆದರಿಕೆ ಹಾಕಿದ್ದು ವರದಿಯಾಗಿತ್ತು. ತನಿಖೆಯ ವೇಳೆ ಅಚಾನಕ್ಕಾಗಿ 7ನೇ ತರಗತಿ ವಿದ್ಯಾರ್ಥಿ ಪೊಲೀಸ್​​ ಕಂಟ್ರೋಲ್​ ರೂಮಿಗೆ ಕರೆ ಮಾಡಿದ್ದ ಎಂದು ತಿಳಿದುಬಂದಿತ್ತು. ಈ ಬಗ್ಗೆ ಪೊಲೀಸರು ನಿಗಾ ವಹಿಸಿದ್ದಾರೆ.

ನವೆಂಬರ್​ 1 ರಂದು ಕೇರಳ ರಾಜ್ಯ ಪೊಲೀಸ್​ ಪ್ರಧಾನ ಕಚೇರಿಯ ನಿಯಂತ್ರಣ ಕೊಠಡಿಗೆ ದೂರವಾಣಿ ಕರೆ ಮಾಡಿದ್ದ ಬಾಲಕ ಸಿಎಂ ಪಿಣರಾಯಿ ವಿಜಯನ್​ರ ಕೊಲೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದ. ತಕ್ಷಣವೇ ಅಲ್ಲಿನ ಸಿಬ್ಬಂದಿ ಈ ಬಗ್ಗೆ ಪೊಲೀಸ್​ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದರು.

ತಕ್ಷಣವೇ ಕರೆಯ ನೆಟ್​ವರ್ಕ್​ ಟ್ರೇಸ್​ ಮಾಡಿದಾಗ ತಿರುವನಂತಪುರದಿಂದ ಬಂದಿದ್ದು ತಿಳಿದುಬಂದಿತ್ತು. ಕರೆ ಮಾಡಿದ್ದು 11 ವರ್ಷದ ಬಾಲಕ ಎಂದು ತಿಳಿದಿತ್ತು. ಬಳಿಕ ಪೊಲೀಸರು ಬಾಲಕನ ಮನೆಗೆ ಭೇಟಿ ನೀಡಿ ತನಿಖೆ ನಡೆಸಿದಾಗ ಈ ವೇಳೆ ಬಾಲಕನ ಪೋಷಕರು, 7 ನೇ ತರಗತಿಯಲ್ಲಿ ಓದುತ್ತಿರುವ ತಮ್ಮ ಮಗ ಮೊಬೈಲ್‌ನಲ್ಲಿ ಆಟವಾಡುವ ವೇಳೆ ಅಚಾನಕ್ಕಾಗಿ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದಾನೆ ಎಂದು ಹೇಳಿದ್ದರು. ಆದರೂ, ಪಿಣರಾಯಿ ವಿಜಯನ್ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಇದನ್ನೂ ಓದಿ:ಮಸೂದೆಗಳು ಬಾಕಿ: ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಕೇರಳ ಸರ್ಕಾರ v/s ರಾಜ್ಯಪಾಲರ ಕಿತ್ತಾಟ

ABOUT THE AUTHOR

...view details