ಕೋಲ್ಕತ್ತಾ (ಪಶ್ಚಿಮ ಬಂಗಾಳ):ಇಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ ವಿಮಾನದಲ್ಲಿ ಬಾಂಬ್ ಇದೆ ಎಂದು ಸುಳ್ಳು ಸುದ್ದಿ ಹರಡಿತ್ತು. ಪ್ರಯಾಣಿಕನೊಬ್ಬ ವಿಮಾನ ಹಾರಾಟಕ್ಕೆ ಮುನ್ನ ಈ ರೀತಿಯ ಭೀತಿಯೊಂದನ್ನು ಸೃಷ್ಟಿಸಿದ್ದ. ಇದರಿಂದ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೆಳಕ್ಕೆ ಇಳಿಸಿ ತಪಾಸಣೆ ಮಾಡಲಾಯಿತು. ಆದರೆ ವಿಮಾನದಲ್ಲಿ ಬಾಂಬ್ ಇರಲಿಲ್ಲ ಎಂಬ ಮಾಹಿತಿ ತಪಾಸಣೆ ಬಳಿಕ ಖಚಿತವಾಯಿತು. ಇದರಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.
ಮುಂಜಾನೆ 3:29ಕ್ಕೆ ಕತಾರ್ ಏರ್‌ವೇಸ್ ವಿಮಾನದಲ್ಲಿ ಬಾಂಬ್ ಭೀತಿ ಹರಡಿತ್ತು. ಕೋಲ್ಕತ್ತಾದಿಂದ ದೋಹಾಗೆ ಹೊರಟಿದ್ದ QR 541 ವಿಮಾನದಲ್ಲಿ ಪ್ರಯಾಣಿಕ ಒಬ್ಬ ಕಿರುಚಾಟ ನಡೆಸಿದ್ದ, ಇದರಿಂದಾಗಿ ಸಿಬ್ಬಂದಿ ಭಯಭೀತರಾಗಿದ್ದರು. ಅಲ್ಲದೇ ಸಹ ಪ್ರಯಾಣಿಕರು ಸಹ ಭೀತಿಗೆ ಒಳಗಾಗಿದ್ದರು. ಬಾಂಬ್ ಭೀತಿಯ ಸುದ್ದಿ ಕೇಳುತ್ತಿದ್ದಂತೆ ಸಿಬ್ಬಂದಿ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಭದ್ರತಾ ಅಧಿಕಾರಿಗಳು ಕಿರುಚಾಡುತ್ತಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಿದ ಬಳಿಕ, ಆತನ ಹೇಳಿಕೆಯಂತೆ ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಕೆಳಕ್ಕೆ ಇಳಿಸಿ, ವಿಮಾನವನ್ನು ತಪಾಸಣೆಗೆ ಒಳಪಡಿಸಿದ್ದರು. ತಪಾಸಣೆ ಬಳಿಕ ಅದರಲ್ಲಿ ಯಾವುದೇ ಬಾಂಬ್ ಇರಲಿಲ್ಲ. ಇದೊಂದು ಸುಳ್ಳು ಸುದ್ದಿ ಎಂದು ಖಚಿತವಾಗಿತ್ತು.
ಇದನ್ನೂ ಓದಿ:ಮಣಿಪುರದಲ್ಲಿ ಭದ್ರತಾ ಪಡೆ ದಂಗೆಕೋರರ ನಡುವೆ ಗುಂಡಿನ ದಾಳಿ: ಬಿಎಸ್‌ಎಫ್ ಜವಾನ ಹುತಾತ್ಮ