ಕೋಲ್ಕತ್ತಾ, ಪಶ್ಚಿಮಬಂಗಾಳ:ನಗರದ ಭಾರತೀಯ ವಸ್ತುಸಂಗ್ರಹಾಲಯವನ್ನು ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆ ಬಂದಿದೆ. ಈ ಕುರಿತು ಪೊಲೀಸರಿಗೆ ಬೆದರಿಕೆ ಮೇಲ್ ಬಂದಿದೆ. ಮಾಹಿತಿ ತಿಳಿದು ಕೋಲ್ಕತ್ತಾ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ತಂಡದವರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ವಸ್ತುಸಂಗ್ರಹಾಲಯಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ ಎಂದು ಕೋಲ್ಕತ್ತಾ ಪೊಲೀಸರು ಮಾಹಿತಿ ನೀಡಿದ್ದಾರೆ.
ಟೆರರಿಸ್ಟ್ಸ್ 111 ಹೆಸರಿನ ಗುಂಪಿನಿಂದ ನಗರದ ಪೊಲೀಸರಿಗೆ ಮೇಲ್ ಕಳುಹಿಸಲಾಗಿದೆ. ಕೋಲ್ಕತ್ತಾದಲ್ಲಿರುವ ಭಾರತೀಯ ಮ್ಯೂಸಿಯಂ ಮೇಲೆ ಬಾಂಬ್ ಸ್ಫೋಟಿಸುವ ಯೋಜನೆ ಇದೆ ಎಂದು ಈ ಬೆದರಿಕೆ ಮೇಲ್‌ನಲ್ಲಿ ಹೇಳಲಾಗಿದೆ. ಬಳಿಕ ಪೊಲೀಸರು ಕಾರ್ಯಪ್ರವೃತ್ತರಾಗಿ ಬಾಂಬ್ ಸ್ಕ್ವಾಡ್‌ನೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ.
ಇಮೇಲ್ ಕಳುಹಿಸಿದವರು ಉಗ್ರಗಾಮಿ ಸಂಘಟನೆ ಎಂದು ಹೇಳಿಕೊಂಡಿದ್ದಾರೆ. ಭಾರತೀಯ ವಸ್ತುಸಂಗ್ರಹಾಲಯದ ಹಲವು ಸ್ಥಳಗಳಲ್ಲಿ ಬಾಂಬ್ ಇರಿಸಿದ್ದೇವೆ. ತಮ್ಮ ಸಂಘಟನೆಗೆ ಹೆಚ್ಚಿನ ಮನ್ನಣೆ ನೀಡದಿದ್ದರೆ ಮ್ಯೂಸಿಯಂ ಅನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪಾರಂಪರಿಕ ಕಟ್ಟಡದತ್ತ ಉನ್ನತ ಪೊಲೀಸ್ ಅಧಿಕಾರಿಗಳು, ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ವಿನೀತ್ ಗೋಯೆಲ್, ಕೋಲ್ಕತ್ತಾ ಪೊಲೀಸ್ ಮತ್ತು ಎಸ್‌ಟಿಎಫ್‌ನ ಡಿಟೆಕ್ಟಿವ್‌ಗಳು, ಕಮಾಂಡೋಗಳು ದೌಡಾಯಿಸಿ ಪರಿಶೀಲನೆ ಕೈಗೊಂಡಿದ್ದಾರೆ.