ಬೆಲ್ಪಾರಾ/ರಾಜಸ್ಥಾನ:ಹಣಕಾಸಿನ ತೊಂದರೆ ಇದೆ ಎಂದು ಮದುವೆಯಾದ ಮೂರು ತಿಂಗಳಿಗೆ ಪತಿಯೊಬ್ಬ ಹೆಂಡತಿಯನ್ನು ಮಾರಾಟ ಮಾಡಿದ್ದಾನೆ ಎನ್ನಲಾದ ವಿಲಕ್ಷಣ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ.
ಬೆಲ್‌ಪಾರಾ ಪೊಲೀಸ್ ವ್ಯಾಪ್ತಿಯ ಸುಲೇಕೆಲಾ ಗ್ರಾಮದ ಸರೋಜ್ ರಾಣಾ ಎಂಬಾತ ಫೇಸ್‌ಬುಕ್ ಮೂಲಕ ಸೈಂಟಾಲಾ ಪ್ರದೇಶದ ಬೋಲಂಗಿರ್ ಜಿಲ್ಲೆಯ ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡು ಪ್ರೀತಿಯಲ್ಲಿ ಬಿದ್ದಿದ್ದ. ಬಳಿಕ ಉಭಯ ಕುಟುಂಬಗಳ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಇಬ್ಬರು ವಿವಾಹವಾದರು.
ಮದುವೆಯಾದ ಮೂರು ತಿಂಗಳ ನಂತರ ಆರ್ಥಿಕ ಸಮಸ್ಯೆ ಇದೆ ಎಂದು ಹೇಳಿ ಸರೋಜ್ ಪತ್ನಿಯನ್ನು ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲು ಬೇರೆ ಕಡೆ ಹೋಗೋಣ ಎಂದು ಒತ್ತಾಯಿಸಿದ. ನಂತರ ಇಬ್ಬರೂ ಕೆಲಸಕ್ಕೆಂದು ರಾಯಪುರಕ್ಕೆ ತೆರಳಿ, ಅಲ್ಲಿಂದ ರಾಜಸ್ಥಾನದ ಹಳ್ಳಿಯೊಂದಕ್ಕೆ ಹೋದರು.
ಈ ವೇಳೆ ಸರೋಜ್ ತನ್ನ ಪತ್ನಿಯನ್ನು ಅಲ್ಲಿನ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಕುಟುಂಬಸ್ಥರಿಗೆ ಕರೆ ಮಾಡಿ ಆಕೆ ಯಾರೊಂದಿಗೆ ಓಡಿ ಹೋಗಿದ್ದಾಳೆ ಎಂದು ಕಥೆ ಕಟ್ಟಿದ್ದಾನೆ.
ಆತನ ಮೇಲೆ ಅನುಮಾನಗೊಂಡ ಆಕೆಯ ಪೋಷಕರು ಬೆಲ್ಪಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ, ಬೆಲ್ಪಾರಾ ಪೊಲೀಸರು ತನಿಖೆ ನಡೆಸಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ಪತಿಯಿಂದ ಮಾರಾಟವಾಗಿದ್ದ ಪತ್ನಿಯನ್ನು ಪೊಲೀಸರು ರಕ್ಷಿಸಿದ್ದು, ಆರೋಪಿ ಸರೋಜ್ ನನ್ನು ಬಂಧಿಸಿದ್ದಾರೆ.