ಜನಗಾಮ, ತೆಲಂಗಾಣ: ಮದ್ಯ ಸೇವನೆಯಿಂದ ಅನೇಕ ಜನರ ಬಾಳು ಹಾಳಾಗಿದೆ. ಕುಡಿದ ಅಮಲಿನಲ್ಲಿ ನಡೆದ ಜಗಳವೊಂದು ಅಳಿಯನ ಕೊಲೆಯಲ್ಲಿ ಅಂತ್ಯವಾಗಿದೆ. ಸದ್ದು ಮಾಡದೇ ಅಳಿಯನ ಶವವನ್ನು ಸೆಪ್ಟಿಕ್ ಟ್ಯಾಂಕ್‌ನಲ್ಲಿ ಮಾವ ಹೂತು ಹಾಕಿದ್ದಾರೆ. ಈ ಘಟನೆ ಈಗ ಬೆಳಕಿಗೆ ಬಂದಿದೆ. ಈ ಪ್ರಕರಣವೀಗ ಜನಗಾಮ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
ಪೊಲೀಸರು ಹೇಳುವುದಿಷ್ಟು: ಜಿಲ್ಲೆಯ ದೇವರುಪ್ಪುಳ ತಾಲೂಕಿನ ಕಾಮರೆಡ್ಡಿಗುಡ್ ನಿವಾಸಿ ಚಿಂತಾ ಅಬ್ಬಸಾಯಲು - ಲಕ್ಷ್ಮಿ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಚಿಂತಾ ಅಬ್ಬಸಾಯಲು ಅವರ ಎರಡನೇ ಮಗಳು ಶೈಲಜಾಗೆ ಕೊಡಕಂಡ್ಲ ತಾಲೂಕಿನ ಏಡಿನೂತಾಳ ಗ್ರಾಮದಲ್ಲಿರುವ ತನ್ನ ತಂಗಿಯ ಮಗ, ಸೋದರಳಿಯ ರಾಮಿಂಡ್ಲ ನಾಗರಾಜು (45) ಎಂಬಾತನಿಗೆ ಇಪ್ಪತ್ತು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು.
ಚಿಂತಾ ಅಬ್ಬ ಸಾಯಲು - ಲಕ್ಷ್ಮಿ ದಂಪತಿಗೆ ಗಂಡು ಮಕ್ಕಳಿಲ್ಲ. ಮೇಲಾಗಿ ಸ್ವಂತ ತಂಗಿ ಮಗ ಆಗಿರುವುದರಿಂದ ನಾಗರಾಜುನನ್ನು ಮನೆ ಅಳಿಯನಾಗಿ ಮಾಡಿಕೊಳ್ಳಲಾಗಿತ್ತು. ಶೈಲಜಾ-ನಾಗರಾಜು ದಂಪತಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದಿನ ಕಳೆದಂತೆ ನಾಗರಾಜು ಕುಡಿತದ ಚಟಕ್ಕೆ ದಾಸನಾಗಿದ್ದ.
ನಾಗರಾಜು ಕುಡಿದು ಮನೆಗೆ ಬಂದು ಆಗಾಗ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಈ ಸಂಬಂಧ ನಾಗರಾಜು ಪತ್ನಿ ಶೈಲಜಾ ದೇವರುಪ್ಪುಳ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು. ನಾಗರಾಜು ಸೋಮವಾರ ರಾತ್ರಿ ಕುಡಿದು ಮನೆಗೆ ಬಂದಿದ್ದ. ಬಳಿಕ ಪತ್ನಿಯೊಂದಿಗೆ ಜಗಳವಾಡಿಕೊಂಡಿದ್ದ . ಆದರೂ ಪತ್ನಿ ನಾಗರಾಜುವಿಗೆ ತುತ್ತು ಮಾಡಿ ಊಟ ಮಾಡಿಸಲು ಮುಂದಾಗಿದ್ದಾರೆ. ಈ ವೇಳೆ ನಾಗರಾಜು ತನ್ನ ಪತ್ನಿಯ ಬೆರಳುಗಳನ್ನು ಬಲವಾಗಿ ಕಚ್ಚಿದ್ದಾನೆ. ನೋವು ತಾಳದೇ ಶೈಲಜಾ ಜೋರಾಗಿ ಕೂಗಾಡಿದ್ದಾಳೆ. ಮಗಳ ಕಿರುಚಾಟ ಕೇಳಿ ತಂದೆ ಅಬ್ಬಸಾಯಲು ಅಲ್ಲಿಗೆ ಬಂದು ಕೋಪದಿಂದ ನಾಗರಾಜು ಕೆನ್ನೆಗೆ ಬಲವಾಗಿ ಹೊಡೆದಿದ್ದಾರೆ. ಸಿಟ್ಟಿಗೆದ್ದ ಅಳಿಯ ತನ್ನ ಮಾವನ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಈ ಕ್ರಮದಲ್ಲಿ ಅಬ್ಬಸಾಯಲು ಅಳಿಯ ನಾಗರಾಜ್ನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಅಳಿಯನನ್ನು ಸೆಪ್ಟಿಕ್ ಟ್ಯಾಂಕ್‌ನಲ್ಲಿ ಹೂತಿಟ್ಟ ಮಾವ:ನಂತರ ಗಾಬರಿಗೊಂಡ ಮಾವ ತನ್ನ ಅಳಿಯನ ಶವವನ್ನು ಸೆಪ್ಟಿಕ್ ಟ್ಯಾಂಕ್‌ನಲ್ಲಿ ಹೂತು ಹಾಕಿದ್ದಾರೆ. ಏನೂ ಆಗಿಲ್ಲವೆಂಬಂತೆ ಮರುದಿನ ಎಂದಿನಂತೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಮೃತರ ಹಿರಿಯ ಪುತ್ರ ಕಿರಣ್ ಮಂಗಳವಾರ ಬೆಳಗ್ಗೆ ಜನಗಾಮದಲ್ಲಿರುವ ತನ್ನ ಸ್ನೇಹಿತನ ಮನೆಯಿಂದ ಬಂದಿದ್ದು, ಮನೆಯಲ್ಲಿ ತಂದೆ ಇಲ್ಲದಿರುವುದನ್ನು ಗಮನಿಸಿದ್ದಾರೆ. ಚೆಲ್ಲಾಪಿಲ್ಲಿಯಾಗಿದ್ದ ಬಟ್ಟೆಗಳನ್ನು ನೋಡಿ ವಿಚಾರಿಸಿದಾಗ ಅಸಲಿ ವಿಷಯ ಹೊರಬಿದ್ದಿದೆ. ಇದರಿಂದ ಭಯಗೊಂಡ ಅಬ್ಬಸಾಯಲು ಗ್ರಾಮದ ಎಂಪಿಟಿಸಿ ಸದಸ್ಯ ಜಾಕೀರ್‌ಗೆ ಮಾಹಿತಿ ನೀಡಿದ್ದಾರೆ.
ಈ ಘಟನೆಯನ್ನು ಸರಪಂಚ ಬಿಲ್ಲ ಅಂಜಮ್ಮ ಯಾದವರೆಡ್ಡಿ ಅವರಿಗೆ ತಲುಪಿದೆ. ಅವರ ಸಲಹೆ ಮೇರೆಗೆ ಆರೋಪಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಸೆಪ್ಟಿಕ್ ಟ್ಯಾಂಕ್‌ನಿಂದ ಹೊರತೆಗೆದಿದ್ದಾರೆ. ಮೃತದೇಹವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕೇಸ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಓದಿ:Hassan crime: ಮದ್ಯ ಸೇವಿಸಿದ ವಿಷಯವನ್ನು ತಂದೆಗೆ ತಿಳಿಸಿದ ಸ್ನೇಹಿತನ ಕೊಲೆ; ಇಬ್ಬರು ಸೆರೆ