ಪ್ರಯಾಗರಾಜ್, ಉತ್ತರಪ್ರದೇಶ:ಗ್ಯಾಂಗ್ಸ್ಟರ್ಬಾಹುಬಲಿ ಅತೀಕ್ ಅಹ್ಮದ್ ಪುತ್ರ ಅಸದ್ ಎನ್‌ಕೌಂಟರ್‌ನಲ್ಲಿ ಹತನಾದ ನಂತರ ಆತನ ಅಂತ್ಯಕ್ರಿಯೆ ವಿಧಿವಿಧಾನಗಳ ಪ್ರಕಾರ ನಡೆಯಿತು. 4 ಬಾರಿ ಶಾಸಕ ಮತ್ತು ಒಂದು ಬಾರಿ ಸಂಸದ ಆಗಿರುವ ಅತೀಕ್ ಅವರ ಬೆಂಬಲಿಗರು ಅವರ ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಆದ್ರೆ ಸಮಾಧಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಪೊಲೀಸರು ನಿಕಟ ಸಂಬಂಧಿಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಅಸ್ಸಾದ್ ಅವರ ತಾಯಿಯ ಅಜ್ಜ ಸೇರಿದಂತೆ ಕೆಲ ಸಂಬಂಧಿಗಳು ಭಾಗಿಯಾಗಿದ್ದರು.
ಶನಿವಾರ ಬೆಳಗ್ಗೆ ಝಾನ್ಸಿಯಿಂದ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತರಾದ ಅಸದ್‌ನ ಮೃತದೇಹದೊಂದಿಗೆ ಪ್ರಯಾಗರಾಜ್‌ನ ಕಸರಿ ಮಸಾರಿ ಸ್ಮಶಾನಕ್ಕೆ ತಲುಪಿದರು. ಸ್ವಲ್ಪ ಸಮಯದ ನಂತರ, ಅಸದ್ ಮೃತದೇಹವನ್ನು ಅತೀಕ್ ಅಹ್ಮದ್ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಪೊಲೀಸರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೇವಲ 35 ಸಂಬಂಧಿಕರಿಗೆ ಮಾತ್ರ ಅವಕಾಶ ನೀಡಿದ್ದರು. ಅತೀಕ್ ಅಹಮದ್‌ಗೆ ತನ್ನ ಮಗ ಅಸದ್‌ನ ಕೊನೆಯ ನೋಟವನ್ನು ನೋಡಲು ಸಾಧ್ಯವಾಗಲಿಲ್ಲ. ಅತೀಕ್ ಅಹಮದ್ ಮನೆಯಿಂದ ಸ್ಮಶಾನದವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ: ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತರಾದ ಅಸದ್ ಅಹಮದ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಜೈಲಿನಲ್ಲಿರುವ ಅತೀಕ್ ಅಹಮದ್ ಮತ್ತು ಅವರ ಪುತ್ರ ಅಲಿ ಅಹಮದ್ ಪರವಾಗಿ ಶನಿವಾರ ಬೆಳಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರವೇ ಅತೀಕ್ ಮತ್ತು ಅವರ ಪುತ್ರನ ಪರವಾಗಿ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿತ್ತು. ಆದರೆ ಶುಕ್ರವಾರದಂದು ಅಂಬೇಡ್ಕರ್ ಜಯಂತಿ ಇದ್ದ ಕಾರಣ ನ್ಯಾಯಾಲಯಕ್ಕೆ ರಜೆಯಿತ್ತು. ಹೀಗಾಗಿ ಅವರ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಶನಿವಾರ ಬೆಳಗ್ಗೆ ಅತೀಕ್ ಅಹಮದ್ ಪರ ವಕೀಲರ ಪರವಾಗಿ ನ್ಯಾಯಾಲಯ ತೆರೆಯುತ್ತಿದ್ದಂತೆ ಅಸದ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.
ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ಅತೀಕ್ ಅಹ್ಮದ್ ಅವರನ್ನು ಪೊಲೀಸ್ ಕಸ್ಟಡಿಯಿಂದ ಅವರ ಮಗನ ಅಂತ್ಯಕ್ರಿಯೆಗೆ ಕರೆದೊಯ್ಯಬಹುದಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಗೆ ಮುನ್ನ ಮೃತದೇಹವು ಝಾನ್ಸಿಯಿಂದ ಪ್ರಯಾಗ್‌ರಾಜ್‌ಗೆ ತಲುಪಿದ್ದು, ಅಂತ್ಯಕ್ರಿಯೆಯ ವಿಧಿವಿಧಾನಗಳು ಪೂರ್ಣಗೊಂಡಿದ್ದಾವೆ. ಕೊನೆಗೂ ಅತೀಕ್ ಅಹಮದ್‌ಗೆ ತನ್ನ ಮಗ ಅಸದ್‌ನ ಕೊನೆಯ ನೋಟವನ್ನು ನೋಡಲು ಸಾಧ್ಯವಾಗಲೇ ಇಲ್ಲ.